ಮತ್ತೊಮ್ಮೆ 'ಗೂಢಾಚಾರಿ' ಆಗಲು ಹೊರಟ ಅಡವಿ ಶೇಷ್​ …

Adavi Shesh - G2
Published on

ಹೈದರಾಬಾದ್​: 'ಹಿಟ್​ 2' ಚಿತ್ರದ ನಂತರ ಇನ್ನೊಂದು ಸೀಕ್ವೆಲ್​ಗೆ ತಯಾರಾಗುತ್ತಿದ್ದಾರೆ ಅಡವಿ ಶೇಷ್​. ಈ ಬಾರಿ ಅವರು ತಮ್ಮ ಹಿಟ್​ ಚಿತ್ರವಾದ 'ಗೂಢಾಚಾರಿ'ಯ ಮುಂದುವರೆದ ಭಾಗದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದು, ಜನವರಿ 9ರಂದು ಪ್ರಿ ವಿಷನ್ ವೀಡಿಯೋ ಬಿಡುಗಡೆಯಾಗುತ್ತಿದೆ.

ಹೌದು, ಕೆಲವು ವರ್ಷಗಳ ಹಿಂದೆ ಶಶಿಕಿರಣ್ ಟಿಕ್ಕ ನಿರ್ದೇಶನದಲ್ಲಿ ಮೂಡಿ ಬಂದ ‘ಗೂಢಾಚಾರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಈಗ ಅದರ ಮುಂದುವರೆದ ಭಾಗಕ್ಕೆ ತಯಾರಿ ನಡೆದಿದೆ. ಆಗ ‘ಗೂಢಾಚಾರಿ’ ಬರೀ ತೆಲುಗಿನಲ್ಲಿ ಮೂಡಿಬಂದಿತ್ತು. ಆದರೆ, 'ಮೇಜರ್​' ಮತ್ತು 'ಹಿಟ್​ 2' ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ 'ಗೂಢಾಚಾರಿ 2' ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿ ಮೂಡಿಬರಲಿದೆ.

ವಿಶೇಷವೆಂದರೆ, ಈ ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದು, ‘ಮೇಜರ್’ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್​​ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮೊದಲ ಚಿತ್ರದಲ್ಲಿದ್ದ ಕಲಾವಿದರ ಜತೆಗೆ ಒಂದಿಷ್ಟು ಬೇರೆ ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net