

ಬೆಂಗಳೂರು: ಹೊಸ ವರ್ಷಕ್ಕೆ ಒಂದಿಷ್ಟು ಹೊಸ ಚಿತ್ರಗಳ ಘೋಷಣೆಯಾಗಿವೆ. ಈ ಪೈಕಿ 'ಕಿಂಗ್ & ಕ್ವೀನ್' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಹ ಒಂದು. ಈ ಚಿತ್ರದ ಚಿತ್ರೀಕರಣ ಫೆಬ್ರವರಿಯಿಂದ ಪ್ರಾರಂಭವಾಗಲಿದ್ದು, ಮೊದಲ ಹಂತವಾಗಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಈ ವರ್ಷದ ಮೊದಲ ಚಿತ್ರ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಈ ಹಿಂದೆ 'ಡೇವಿಡ್' ಚಿತ್ರದಲ್ಲಿ ನಾಯಕನಾಗಿದ್ದ ಶ್ರೇಯಸ್ ಚಿಂಗ ಹಾಗೂ ಇತಿ ಆಚಾರ್ಯ ನಟಿಸುತ್ತಿರುವ ಚಿತ್ರ ಇದು. ಜಗ್ಗೇಶ್ ಮಗ ಯತಿರಾಜ್ ಸಹ ಒಂದು ವಿಶೇಷ ಪಾತ್ರ ಮಾಡುತ್ತಿದ್ದಾರಂತೆ. ಈ ಹಿಂದೆ 'ಡೇವಿಡ್' ನಿರ್ಮಿಸಿದ್ದ ಪ್ರಸಾದ್ ರುದ್ರಮುನಿ ನಿರಗಂಟಿ, ಪ್ರದೀಪ್ ಅಬ್ಬಯ್ಯ ಹಾಗೂ ವರುಣ್ ರಾಘವೇಂದ್ರ ಈ ಚಿತ್ರವನ್ನೂ ನಿರ್ಮಿಸಿದ್ದಾರೆ.
ಇದಕ್ಕೂ ಮೊದಲು ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಅರ್ಜುನ್ ಸುಬ್ರಹ್ಮಣ್ಯ, ಈ ಚಿತ್ರವನ್ನೂ ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ.
ಇದನ್ನೂ ಓದಿ: 15ನೇ ವಯಸ್ಸಿಗೆ ಮನೆ ಖರೀದಿಸಿದ ನಟಿ..!
'ಕಿಂಗ್ & ಕ್ವೀನ್' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಅಲೋಕ್ ಅಲಿಯಾಸ್ ಆಲ್ ಓಕೆ ಸಂಗೀತ ಸಂಯೋಜಿಸಲಿದ್ದಾರೆ. ಶ್ರೇಯಸ್ ಚಿಂಗ ಮತ್ತು ಇತಿ ಆಚಾರ್ಯ ಜತೆಗೆ ಶೋಭರಾಜ್, ಲಲಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.