ಮೃಗವಾದ ರಣಬೀರ್​ ಕಪೂರ್; ಮೊದಲ ಬಾರಿಗೆ ಆಕ್ಷನ್​ ಹೀರೋ ಆಗಿ ನಟನೆ

Animal First Look - Final
Published on

ಮುಂಬೈ: ರಣಬೀರ್​ ಕಪೂರ್​ ಇದುವರೆಗೂ ಸಾಫ್ಟ್​ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆಕ್ಷನ್​ ಹೀರೋ ಆಗಿ ಕಾಣಿಸಿಕೊಳ್ಳಬೇಕು ಎಂಬ ಅವರ ಆಸೆ ಕೊನೆಗೂ ಈಗ ಈಡೇರಿದೆ.

'ಅರ್ಜುನ್​ ರೆಡ್ಡಿ' ಖ್ಯಾತಿಯ ನಿರ್ದೇಶಕ ಸಂದೀಪ್​ ವಂಗಾ ನಿರ್ದೇಶನದ ಚಿತ್ರದಲ್ಲಿ ರಣಬೀರ್​ ಕಪೂರ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊಸದಲ್ಲ. ಈ ಚಿತ್ರಕ್ಕೆ 'ಅನಿಮಲ್​' ಎಂಬ ಹೆಸರಿಟ್ಟಿರುವುದೂ ಗೊತ್ತಿರಬಹುದು. ಇದೊಂದು ಔಟ್​ ಅಂಡ್​ ಔಟ್​ ಆಕ್ಷನ್​ ಚಿತ್ರವಾಗಿದ್ದು, ಈ ಚಿತ್ರದ ರಣಬೀರ್​ ಕಪೂರ್​ ಅವರ ಫಸ್ಟ್​ ಲುಕ್​, ಹೊಸ ವರ್ಷದ ಪ್ರಯುಕ್ತ ಬಿಡುಡೆಯಾಗಿದೆ. ಈ ಪೋಸ್ಟರ್​ನಲ್ಲಿ ರಣಬೀರ್​ ಕೈ ಮತ್ತು ಮುಖಕ್ಕೆ ಗಾಯಗಳಾಗಿದ್ದು, ತಮ್ಮ ರಕ್ತಸಿಕ್ತ ಕೈಗಳಲ್ಲಿ ಕೊಡಲಿ ಹಿಡಿದು ಸಿಗರೇಟ್​ ಉರಿಸುತ್ತಿರುವ ಈ ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಅಂದಹಾಗೆ, 'ಅನಿಮಲ್​' ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಹಿಂದಿಯಲ್ಲಿ ತಯಾರಾಗಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ರಣಬೀರ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅನಿಲ್​ ಕಪೂರ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಟಿ-ಸಿರೀಸ್ ಮತ್ತು ಬದ್ರಕಾಳಿ ಪಿಕ್ಚರ್ಸ್​ನಡಿ ಭೂಷಣ್ ಕುಮಾರ್ ಮತ್ತು ಪ್ರಣಯ್ ರೆಡ್ಡಿ ವಾಂಗ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಫಸ್ಟ್​ ಲುಕ್​ ಜತೆಗೆ ಚಿತ್ರದ ಬಿಡುಗಡೆ ದಿನಾಂಕವೂ ಹೊರಬಿದ್ದಿದ್ದು, 'ಅನಿಮಲ್​' ಜಗತ್ತಿನಾದ್ಯಂತ ಆಗಸ್ಟ್​ 11, 2023ಕ್ಕೆ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net