ಪ್ರಮಾಣವಚನ ಸ್ವೀಕರಿಸಲು 25 ನಿಮಿಷ ತಡವಾಗಿ ಓಡೋಡಿ ಬಂದ ಶಶಿಕಲಾ ಜೊಲ್ಲೆ!

shashikala jolle
Published on

ಬೆಂಗಳೂರು: ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಶಶಿಕಲಾ ಜೊಲ್ಲೆ ಅವರು 25 ನಿಮಿಷ ತಡವಾಗಿ ಆಗಮಿಸಿದರು.

ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಶಾಸಕರು ಸೇರ್ಪಡೆಗೊಂಡಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಕಾರ್ಯಕ್ರಮ ಆರಂಭವಾದರೂ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಶಶಿಕಲಾ ಜೊಲ್ಲೆ ಬಂದದ್ದು ಮಾತ್ರ ತಡವಾಗಿ!

ಆರಂಭದಲ್ಲಿ ಪೂರ್ಣಿಮಾ ಶ್ರೀನಿವಾಸ್​ ಅವರಿಗೆ ಸಚಿವೆ ಸ್ಥಾನ ಸಿಗಲಿದೆ, ಜೊಲ್ಲೆಯನ್ನು ಕೈಬಿಡಲಾಗುತ್ತೆ ಎಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಜೊಲ್ಲೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. 'ನೀವು ಸಚಿವರಾಗಿ ಆಯ್ಕೆಯಾಗಿದ್ದೀರಿ' ಎಂದು ಸಿಎಂ ಅವರಿಂದ ಇಂದು ಬೆಳಗ್ಗೆ ಮೊಬೈಲ್​ ಕರೆ ಹೋಗುತ್ತಿದ್ದಂತೆ ಜೊಲ್ಲೆ ಬೆಂಗಳೂರಿಗೆ ವಿಮಾನ ಮೂಲಕ ಆಗಮಿಸಿದರು. ಪತಿ ಅಣ್ಣಾಸಾಹೇಬ ಕೂಡ ಜೊಲ್ಲೆ ಜತೆಯಲ್ಲಿದ್ದರು. ಶಶಿಕಲಾ ಜೊಲ್ಲೆ ಆಗಮನಕ್ಕಾಗಿ ಏರ್​ಪೋರ್ಟ್​ನಿಂದ ರಾಜಭವನದವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಉನ್ನತ ಅಧಿಕಾರಿಗಳ ಆದೇಶದಂತೆ ಸಂಚಾರಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಅಂತೂ 25 ನಿಮಿಷ ತಡವಾಗಿ ಆಗಮಿಸಿದ ಜೊಲ್ಲೆ, ಪ್ರಮಾಣವಚನ ಸ್ವೀಕರಿಸಿ ಗೆಲುವಿನ ನಗೆ ಬೀರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net