

ದಾವಣಗೆರೆ: ನಗರದ ಆಂಜನೇಯ ಕಾಟನ್ ಮಿಲ್ ಪ್ರದೇಶದಲ್ಲಿ ಸಹೋದರಿಯರಿಬ್ಬರು ಅನುಮಾನಸ್ಪದವಾಗಿ ಮನೆಯಲ್ಲಿ ಮೃತಪಟ್ಟಿದ್ದು, ಸಾವಿಗೂ ಮುನ್ನ ಆ ಮನೆಗೆ ಬಂದು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗೌರಮ್ಮ(34) ಮತ್ತು ರಾಧಮ್ಮ(32) ಮೃತ ಸಹೋದರಿಯರು. ಕೂಡ್ಲಿಗಿ ತಾಲೂಕು ಬೆನಕನಹಳ್ಳಿ ಗ್ರಾಮದ ಇವರಿಬ್ಬರೂ ಆಂಜನೇಯ ಕಾಟನ್ ಮಿಲ್ನಲ್ಲಿ ಕಾರ್ಮಿಕರಾಗಿದ್ದರು. ಗೌರಮ್ಮನ ಜತೆ ತಂಗಿ ರಾಧಮ್ಮ ಕಳೆದ 10 ವರ್ಷದಿಂದ ವಾಸವಿದ್ದಳು. ಗೌರಮ್ಮಗೆ ಮದುವೆ ಆಗಿದ್ದು, ಗಂಡ ಮಂಜುನಾಥ ಬೇರೆಡೆ ಕೆಲಸ ಮಾಡುತ್ತಿದ್ದ.
ಗೌರಮ್ಮ-ಮಂಜುನಾಥ ನಡುವೆ ಆಗಾಗ ಕಲಹ ನಡೆಯುತ್ತಲೇ ಇತ್ತಂತೆ. ಕಳೆದ ವಾರ ಮನೆಗೆ ಬಂದಿದ್ದ ಮಂಜುನಾಥ ಎರಡು ದಿನ ಇದ್ದು ಹೋಗಿದ್ದ. ಇದಾದ ಮೇಲೆ ಐದಾರು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ. ಅಕ್ಕ-ತಂಗಿಯ ಸುಳಿವೂ ಇರಲಿಲ್ಲ. ಅನುಮಾನಗೊಂಡ ಸ್ಥಳೀಯರು ಅವರ ಸಂಬಂಧಿಗಳಿಗೆ ಮಾಹಿತಿ ನೀಡಿದ್ದರು. ಮನೆಯ ಬಾಗಿಲು ಒಡೆದು ತೆರೆದಾಗ ಸಹೋದರಿಯರ ಶವಗಳು ಪತ್ತೆಯಾಗಿವೆ. ಮೃತದೇಹಗಳು ಊದಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿದ್ದವು. ಕಳೆದ ವಾರ ಮನೆಗೆ ಬಂದು ಹೋಗಿದ್ದ ಮಂಜುನಾಥನ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಆ ರಾತ್ರಿ ಏನಾಯ್ತು ಎಂಬುದು ಪೊಲೀಸ್ ತನಿಖೆ ಬಳಿಕ ಬಯಲಾಗಬೇಕಿದೆ. ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.