

ಧಾರವಾಡ: ಹಾವಿಗೂ ಕ್ಯಾನ್ಸರ್ ಬರುತ್ತದೆ ಎಂದರೆ ಆಶ್ಚರ್ಯವಾಗುವುದು ಸಹಜ. ಇದಕ್ಕೆ ನಿದರ್ಶನ ಧಾರವಾಡದಲ್ಲಿ ದೊರೆತಿದೆ. ಹಾವಿನ ತಲೆ ಭಾಗದಲ್ಲಿದ್ದ ಗಂಟನ್ನು ಗಮನಿಸಿ, ಅದು ಕ್ಯಾನ್ಸರ್ ಎಂದು ಪತ್ತೆ ಮಾಡಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿರುವ ಶ್ರೇಯಸ್ಸು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಡಾ. ಅನಿಲಕುಮಾರ ಅವರಿಗೆ ಸಂದಿದೆ.
ನಗರದ ಪ್ರಾಣಿರಕ್ಷಕ ಸೋಮಶೇಖರ ಚನ್ನಶೆಟ್ಟಿ ಇತ್ತೀಚೆಗೆ ಇಲ್ಲಿನ ಮನೆಯೊಂದಕ್ಕೆ ನುಗ್ಗಿದ್ದ ಆಭರಣ ಹಾವನ್ನು ರಕ್ಷಿಸಿದ್ದರು. ಅದನ್ನು ಕಾಡಿಗೆ ಬಿಡುತ್ತಿದ್ದ ವೇಳೆ ತಲೆಯ ಮೇಲೆ ಗಂಟು ಇರುವುದನ್ನು ಗಮನಿಸಿದರು. ಕೃಷಿ ವಿವಿಯ ಡಾ. ಅನಿಲಕುಮಾರ ಅವರನ್ನು ಸಂರ್ಪಸಿ ಚಿಕಿತ್ಸೆಗೆ ಒಯ್ದರು. ತಪಾಸಣೆ ಮಾಡಿದ ಡಾ. ಅನಿಲಕುಮಾರ, ಅದು ಕ್ಯಾನ್ಸರ್ ಗಡ್ಡೆ ಎಂಬುದನ್ನು ಖಚಿತಪಡಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಹಾವಿನ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯಲಾಗಿದ್ದು, ಸದ್ಯ ಹಾವು ಆರೋಗ್ಯವಾಗಿ ಸೋಮಶೇಖರ ಅವರ ಆರೖಕೆಯಲ್ಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಅನಿಲಕುಮಾರ, ಪ್ರಾಣಿಗಳಲ್ಲಿ ಕ್ಯಾನ್ಸರ್ ರೋಗ ಸಹಜ. ಆದರೆ, ಇದೇ ಮೊದಲ ಬಾರಿಗೆ ಹಾವಿನಲ್ಲಿ ಪತ್ತೆಯಾಗಿತ್ತು. ಅರ್ಧ ಗಂಟೆ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗಂಟನ್ನು ತೆಗೆಯಲಾಗಿದೆ ಎಂದು ಹೇಳಿದರು.