

ನವದೆಹಲಿ: ಅಪರೂಪದ ಎರಡು ತಲೆಯ ಹಾವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಮೆರಿಕ ರಾಜ್ಯ ಮಿಸ್ಸೋರಿಯ ಕನ್ಸಾಸ್ ನಗರದಲ್ಲಿರುವ ಪ್ರಕೃತಿ ಕೇಂದ್ರದಲ್ಲಿ ಈ ಅಪರೂಪದ ಹಾವನ್ನು ಸಂರಕ್ಷಿಸಲಾಗಿದೆ.
ಇದೊಂದು ಹೆಣ್ಣು ಕೇರೆಹಾವು ಆಗಿದ್ದು, ಅಪಾಯಕಾರಿಯಲ್ಲ. ಈ ಹಾವಿಗೆ ಟೈಗರ್ ಮತ್ತ ಲಿಲ್ಲಿ ಎಂದು ಹೆಸರಿಡಲಾಗಿದೆ. ಹೊಳೆಯುವ ಕಪ್ಪು ಚರ್ಮದೊಂದಿಗೆ ನೋಡಲು ತುಂಬಾ ಸುಂದರವಾಗಿದೆ. ಟೈಗರ್-ಲಿಲ್ಲಿಯನ್ನು ನೈಋತ್ಯ ಮಿಸ್ಸೋರಿಯಲ್ಲಿ 2017 ರಲ್ಲಿ ಪತ್ತೆಹಚ್ಚಲಾಯಿತು. ಅಂದಿನಿಂದ ಈ ಹಾವು ಮಿಸ್ಸೋರಿ ಸಂರಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ.
ಟೈಗರ್-ಲಿಲ್ಲಿಗೆ ಇದೀಗ ಏಳು ವರ್ಷ. ಮೂರು ಅಡಿ ಎತ್ತರವಿದೆ. ಈ ಹಾವು ಸುಮಾರು 30 ವರ್ಷಗಳವರೆಗೆ ಬದುಕುತ್ತದೆ ಮತ್ತು ಐದು ಅಡಿಯಷ್ಟು ಉದ್ದ ಬೆಳೆಯುತ್ತದೆ. ಎರಡೂ ತಲೆಗಳು ದೇಹದ ಮೇಲೆ ನಿಯಂತ್ರಣವನ್ನು ಹೊಂದಿವೆ. ಆದಾಗ್ಯೂ, ಒಂದು ತಲೆ ಇನ್ನೊಂದಕ್ಕಿಂತ ದೊಡ್ಡದಾಗಿರುತ್ತದೆ.
ಎಡಭಾಗದಲ್ಲಿರುವ ತಲೆ ಲಿಲ್ಲಿ ಮತ್ತು ಬಲಭಾಗದಲ್ಲಿರುವ ತಲೆಗೆ ಟೈಗರ್ ಎಂದು ಹೆಸರಿಸಲಾಗಿದೆ. ಎರಡೂ ತಲೆಗಳು ಒಂದೇ ಜೀರ್ಣಾಂಗ ವ್ಯವಸ್ಥೆಯನ್ನು ಹಂಚಿಕೊಂಡಿದ್ದರೂ ಎರಡಕ್ಕೂ ಪ್ರತ್ಯೇಕವಾಗಿ ಆಹಾರವನ್ನು ನೀಡಬೇಕಾಗುತ್ತದೆ. ಒಂದಕ್ಕೆ ಅತಿಯಾಗಿ ತಿನ್ನಿಸಿದರೆ, ಮತ್ತೊಂದು ತಲೆ ಕೆಡಿಸಿಕೊಳ್ಳುತ್ತದೆ. ಆದ್ದರಿಂದ ಕೆಲವು ಸಂದರ್ಭಗಳಲ್ಲಿ, ಒಬ್ಬರಿಗೆ ಆಹಾರವನ್ನು ನೀಡುವಾಗ, ಇನ್ನೊಂದು ತಲೆಯನ್ನು ಸಣ್ಣ ಕ್ಯಾಪ್ನಿಂದ ಮುಚ್ಚಲಾಗುತ್ತದೆ.
ಲಿಲ್ಲಿ, ಟೈಗರ್ಗಿಂತ ಹೆಚ್ಚು ಆಹಾರವನ್ನು ತಿನ್ನುತ್ತದೆ ಎಂದು ಹಾವಿನ ಪಾಲಕರು ಹೇಳುತ್ತಾರೆ. ಸದ್ಯ ಈ ಅಪರೂಪದ ಹಾವಿಗೆ ನಿತ್ಯವೂ ಆರೈಕೆ ಮಾಡಲಾಗುತ್ತಿದ್ದು, ಇದನ್ನು ನೋಡಲು ನೂರಾರು ಜನರು ಪ್ರತಿನಿತ್ಯ ಬರುತ್ತಲೇ ಇರುತ್ತಾರೆ. (ಏಜೆನ್ಸೀಸ್)