

ಅಹಮದಾಬಾದ್: ಪೌರಾಣಿಕ ಧಾರಾವಾಹಿ 'ರಾಮಾಯಣ'ದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ ಅವರು ಮಂಗಳವಾರ ರಾತ್ರಿ ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು.
ಬಿಜೆಪಿಯ ಮಾಜಿ ಸಂಸದರೂ ಆದ ತ್ರಿವೇದಿ, ಗುಜರಾತಿ ಸಿನಿಮಾದ ಭೀಷ್ಮ ಎಂದೇ ಖಾತಿಯಾಗಿದ್ದರು. ಗುಜರಾತಿ ರಂಗಭೂಮಿಯಿಂದ ಆರಂಭವಾದ ತ್ರಿವೇದಿ ಅವರ ಸಿನಿ ಜರ್ನಿ, ನಾಲ್ಕು ದಶಕಕಾಲ ಸಿನಿಮಾ ರಂಗದಲ್ಲೇ ಮುಂದುವರಿಯಿತು. ಹಿಂದಿ ಮತ್ತು ಗುಜರಾತಿ ಭಾಷೆಯಲ್ಲಿ ಸುಮಾರು 300 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ರಾಷ್ಟ್ರಮಟ್ಟದಲ್ಲಿ ಇವರನ್ನು ಗುರುತಿಸುವಂತೆ ಮಾಡಿದ್ದು, ಹಿಂದಿ ಭಾಷೆಯಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿಯ ರಾವಣ ಪಾತ್ರ. 'ವಿಕ್ರಮ್ ಔರ್ ಬೇತಾಳ್' ಧಾರಾವಾಯಿಯಲ್ಲೂ ಇವರ ಅಭಿನಯ ಜನ ಮನ್ನಣೆ ಪಡೆದಿತ್ತು.
ಸಬರ್ಕಂಟಾ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ 1991ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತ್ರಿವೇದಿ ಅವರು ಜಯಶಾಲಿಯಾಗಿದ್ದರು. ಕರೊನಾ ಲಾಕ್ಡೌನ್ ವೇಳೆ 'ರಾಮಾಯಣ' ಧಾರಾವಾಹಿಯನ್ನು ಮರುಪ್ರಸಾರ ಮಾಡಿದಾಗ ಈ ಸೀರಿಯಲ್ ನಟರೆಲ್ಲರೂ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದರು.
ಇತ್ತೀಚಿಗೆ ಅನಾರೋಗ್ಯಕ್ಕೀಡಾಗಿದ್ದ ತ್ರಿವೇದಿ ಅವರು ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಕೊನೆಯುಸಿರೆಳೆದರು.