

ಬೆಂಗಳೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ನಟ ಪುನೀತ್ ರಾಜ್ಕುಮಾರ್. ಕಾಕತಾಳೀಯವೋ, ದೇವರ ಮುನ್ಸೂಚನೆಯೋ ಗೊತ್ತಿಲ್ಲ. 2020ರಲ್ಲಿ ರಾಯರ ಮಠಕ್ಕೆ ಭೇಟಿ ನೀಡಿದ್ದ ಪುನೀತ್ ರಾಯರ ಆರಾಧನಾ ಸಂದರ್ಭದಲ್ಲಿ ಅನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, 'ಈ ಭಾರಿ ಖಂಡಿತವಾಗಿಯೂ ರಾಯರ ಆರಾಧನೋತ್ಸವಕ್ಕೆ ಬರುವೆ. ರಥೋತ್ಸವದಲ್ಲಿ ಪಾಲ್ಗೊಳ್ಳುವೆ. ನಾನು ಭಕ್ತಿಗೀತೆಗಳನ್ನ ಹಾಡಿ ಅಭ್ಯಾಸವಿಲ್ಲ. ಆದರೆ, ಈ ಭಾರಿ ರಾಯರ ಆರಾಧನೋತ್ಸವದಲ್ಲಿ ಹಾಡುವೆ' ಎಂದರು. ಆದರೆ ಈ ಮಾತುಗಳನ್ನ ಹೇಳುವ ಮಧ್ಯದಲ್ಲೇ ರಾಯರ ಫೋಟೋ ಬಳಿ ಇಟ್ಟಿದ್ದ ತೊಟ್ಟಿಲುವೀಣೆ ಅಲುಗಾಡಿತ್ತು.
ಆ ವಿಡಿಯೋ ಪುನೀತ್ ಅಗಲಿಕೆ ಬಳಿಕ ವೈರಲ್ ಆಗಿದ್ದು, ದೇವರು ಮೊದಲೇ ಮುನ್ಸೂಚನೆ ಕೊಟ್ಟಿದ್ದರ ಪರಿ ಇದು ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತಿದೆ. 'ನಾನು ಈ ಸಲ ರಾಯರ ಆರಾಧನೋತ್ಸವಕ್ಕೆ ಖಂಡಿತ ಬರುವೆ' ಎಂದು ಪುನೀತ್ ಹೇಳುತ್ತಿದ್ದಂತೆ ರಾಯರ ಫೋಟೋ ಮಡಿಲಲ್ಲಿ ಇದ್ದ ವೀಣೆ ಅಲುಗಾಡಿರುವ ದೃಶ್ಯ ನೋಡಿದ್ರೆ ಇದು ದೈವಿಚ್ಛೆ ಎಂದೇ ಕೆಲವು ಹೇಳುತ್ತಿದ್ದಾರೆ.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ ತೀರ್ಥರು, 'ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ವೀಣೆ ವೀಣೆ ಅಲುಗಾಡಿದ್ದಕ್ಕೂ, ಅವರ ಸಾವಿಗೂ ಸಂಬಂಧವಿಲ್ಲ. ವೀಣೆ ಅಲುಗಾಡಿದ್ದು ಆಕಸ್ಮಿಕವಾಗಿ ಆಗಿರುವ ಘಟನೆ. ಪುನೀತ್ ರಾಜ್ಕುಮಾರ್ ಅವರು ಮಂತ್ರಾಲಯ ರಾಯರ ಪರಮ ಭಕ್ತರಾಗಿದ್ರು. ಅಣ್ಣ-ತಮ್ಮಂದಿರು ಬಂದು ಸಂಗೀತ ಸೇವೆ ಮಾಡ್ಹೋದಾಗಿ ಹೇಳಿದ್ರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಅವರ ಪಾದದಲ್ಲಿ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕುಟುಂಬಸ್ಥರನ್ನ ಮಠಕ್ಕೆ ಕರೆದು ಸಾಂತ್ವಾನ ಹೇಳಲಾಗುವುದು' ಎಂದ ಶ್ರೀಗಳು ತಿಳಿಸಿದ್ದಾರೆ.