ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜ್​ಕುಮಾರ್​ ಹೆಸರು: ಸಚಿವ ಎಸ್​.ಟಿ. ಸೋಮಶೇಖರ್​

puneeth-anushree
Published on

ಬೆಂಗಳೂರು: ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಚಿತ್ರನಗರಿಗೆ ನಟ ಪುನೀತ್​ ರಾಜ್​ಕುಮಾರ್​ ಅವರ ಹೆಸರಿಡಲು ಸಿಎಂ ಜತೆ ಚರ್ಚಿಸುವುದಾಗಿ ಸಚಿವ ಎಸ್​.ಟಿ. ಸೋಮಶೇಖರ್​ ತಿಳಿಸಿದ್ದಾರೆ.

ಪುನೀತ್​ ನಿಧನ ಹಿನ್ನೆಲೆ ಮೈಸೂರಿನಲ್ಲಿ 'ನುಡಿನಮನ' ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸೋಮಶೇಖರ್​, ಮೈಸೂರು ವಿವಿಯ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 'ಪುನೀತ್​ ನುಡಿನಮನ' ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂದು ಪುನೀತ್​ ಕುರಿತ ಪುಸ್ತಕ ಬಿಡುಗಡೆ ಆಗಲಿದೆ. ಶೀಘ್ರವೇ ಕಾರ್ಯಕ್ರಮದ ದಿನಾಂಕ ನಿಗದಿ ಪಡಿಸಲಾಗುವುದು. ಅಪ್ಪು ಅಭಿಮಾನಿಗಳು ಪುನೀತ್​ ಕುರಿತು ರಚಿಸಿದ ಲೇಖನ, ಕವನಗಳನ್ನ ಕಳುಹಿಸಿಕೊಟ್ಟರೆ ಆಯ್ದ ಬರಹಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗುವುದು ಎಂದರು.

ಸಭೆ ಬಳಿಕ ಟ್ವೀಟ್​ ಮಾಡಿರುವ ಸಚಿವ ಸೋಮಶೇಖರ್​, 'ನಮ್ಮನಗಲಿದ ಕನ್ನಡದ ಖ್ಯಾತ ಯುವನಟ ಯುವರತ್ನ ಪುನೀತ್ ರಾಜ್‌ಕುಮಾರ್ ಅವರಿಗೆ ಮೈಸೂರಿನಲ್ಲಿ ದೊಡ್ಡ ವೇದಿಕೆಯಲ್ಲಿ "ನುಡಿನಮನ" ಸಲ್ಲಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು. ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಚಿತ್ರನಗರಿಗೆ ಯುವರತ್ನ ದಿ. ಪುನೀತ್ ರಾಜ್‌ಕುಮಾರ್ ಅವರ ಹೆಸರಿಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು' ಎಂದು ವಿವರಿಸಿದ್ದಾರೆ.

ರಾಜ್ಯಾದ್ಯಂತ ಅಪ್ಪು ನೆನಪಲ್ಲಿ ಅಭಿಮಾನಿಗಳು ಹಲವೆಡೆ ಊರಿನ ಪ್ರಮುಖ ರಸ್ತೆಗಳು, ಸರ್ಕಲ್​ಗಳಿಗೆ ಈಗಾಗಲೇ ಪುನೀತ್​ ರಾಜ್​ಕುಮಾರ್​ ಅವರ ಹೆಸರು ಇಟ್ಟು ಅಭಿಮಾನ ಮೆರೆಯುತ್ತಿದ್ದಾರೆ. ಪುನೀತ್​ ಬದುಕಿದ್ದಾಗಿ ಸಕ್ರೆಬೈಲ್​ನಲ್ಲಿ ಆನೆಮರಿಯೊಂದನ್ನು ಮುದ್ದಾಡಿದ್ದರು. ಇದೀಗ ಆ ಆನೆಗೆ ಪುನೀತ್​ ಎಂದೇ ಅರಣ್ಯ ಸಿಬ್ಬಂದಿ ಹೆಸರು ಇಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net