

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ರಜನಿಕಾಂತ್ ವಿರುದ್ಧ ಅಪ್ಪು ಅಭಿಮಾನಿಗಳು ಮತ್ತು ನೆಟ್ಟಿಗರು ಗರಂ ಆಗಿದ್ದಾರೆ. 'ಈಗಲೂ ಲಾಭ ನೋಡಬೇಡಿ', 'ಅಪ್ಪು ಸಾವಿನಲ್ಲೂ ಲಾಭ ಮಾಡ್ತೀದ್ದೀರಿ', 'ನಿಮ್ಮಂಥ ದಿಗ್ಗಜ ನಟರಿಂದ ನಾವು ಇಂಥಹದ್ದನ್ನು ನಿರೀಕ್ಷಿಸಿರಲಿಲ್ಲ'... ಎಂದು ಕಮೆಂಟ್ ಬಾಕ್ಸ್ನಲ್ಲೇ ತಲೈವಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ರಜನಿಕಾಂತ್ರ ಮೇಲೆ ಅಪ್ಪು ಅಭಿಮಾನಿಗಳು ಸಿಟ್ಟಾಗಿದ್ದೇಕೆ ಗೊತ್ತಾ?
ಡಾ.ರಾಜ್ಕುಮಾರ್ ಕುಟುಂಬಸ್ಥರೊಂದಿಗೆ ರಜನಿಕಾಂತ್ ಅವರಿಗೆ ಉತ್ತಮ ಬಾಂಧವ್ಯ ಇದೆ. 'ಅಪ್ಪು' ಸಿನಿಮಾ 100 ದಿನಗಳ ಸಂಭ್ರಮ ಕಂಡಾಗ 2002ರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಜನಿಕಾಂತ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಪ್ಪು ಅವರ ನಟನೆ ಅಂತರಂಗದಿಂದ ಬಂದಿದೆ ಎಂದು ರಜನಿಕಾಂತ್ ಹಾಡಿಹೊಗಳಿದ್ದರು. ಅ.29ರಂದು ಪುನೀತ್ ರಾಜ್ಕುಮಾರ್ ನಿಧನರಾದ ಸಂದರ್ಭದಲ್ಲಿ ರಜನಿಕಾಂತ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿದ್ದರು. ರಜನಿಕಾಂತ್ಗೆ ಅಪ್ಪು ನಿಧನರಾದ ಸುದ್ದಿ ತಡವಾಗಿ ಗೊತ್ತಾಗಿ ತುಂಬಾ ನೋವು ವ್ಯಕ್ತಪಡಿಸಿದ್ದರು ಎಂದು ಸ್ವತಃ ಶಿವರಾಜ್ಕುಮಾರ್ ಅವರೇ ಹೇಳಿಕೊಂಡಿದ್ದರು. ಅಪ್ಪು ನಿಧನರಾದ 13ನೇ ದಿನ ಅಂದರೆ ನಿನ್ನೆ(ನ.10) ರಜನಿಕಾಂತ್ ಅವರು ಪುನೀತ್ಗೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
'ಪುನೀತ್ ನನ್ನ ಕಣ್ಣಮುಂದೆ ಬೆಳೆದ ಪ್ರೀತಿ ಪಾತ್ರ ಮತ್ತು ಪ್ರತಿಭಾವಂತ ಮಗು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ನಮ್ಮನ್ನು ಅಗಲಿಬಿಟ್ಟರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತುಗಳೇ ಬರುತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಆದರೆ ಅವರು ಸಂತಾಪ ಸೂಚಿಸಲು ಆಯ್ಕೆ ಮಾಡಿಕೊಂಡದ್ದು ತನ್ನ ಮಗಳ hoote aap. ಮಗಳ ಆ್ಯಪ್ ಪ್ರಮೋಟ್ ಮಾಡುವ ಸಲುವಾಗಿ ಅದರಲ್ಲೇ ಪುನೀತ್ಗೆ ಸಂತಾಪ ಸೂಚಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಗಳು ಲಾಂಚ್ ಮಾಡಿರುವ hoot app ಮೂಲಕ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿರುವ ರಜನಿಕಾಂತ್, ಆ ಲಿಂಕ್ ಅನ್ನು ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ. 'ಬೇರೆಲ್ಲಾ ಸೋಶಿಯಲ್ ಮೀಡಿಯಾ ಬಿಟ್ಟು ಮಗಳ ಹೂಟೆ ಆ್ಯಪ್ ಬಳಸಿರುವುದು ಸ್ವಾರ್ಥ ಮತ್ತು ಲಾಭದ ಉದ್ದೇಶದಿಂದ. ಇಂತಹ ಸಂದರ್ಭದಲ್ಲಿಯೂ ಮಗಳ ಆ್ಯಪ್ ಪ್ರಮೋಷನ್ ಮಾಡಿರೋದು ಸರಿಯಲ್ಲ. ನಿಮ್ಮ ಆ್ಯಪ್ಗೂ ಸಂತಾಪಗಳು. ನಿಮ್ಮ ಟ್ವಿಟರ್ ಅನ್ನು ಯಾರು ಹ್ಯಾಂಡಲ್ ಮಾಡುತ್ತಾರೆ?' ಎಂದು ನೆಟ್ಟಿಗರು ಕಟುವಾಗಿಯೇ ಟೀಕಿಸಿದ್ದಾರೆ. ಕೆವರು ರಜನಿಕಾಂತ್ ಪರವಾಗಿಯೂ ಕಮೆಂಟ್ ಮಾಡಿದ್ದಾರೆ.
hoot app ವಾಯ್ಸ್ ಬೇಸಿಡ್ ಆ್ಯಪ್ ಆಗಿದ್ದು, ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರದಾನ ಆದ ದಿನವೇ ಈ ಆ್ಯಪ್ ಲಾಂಚ್ ಆಗಿತ್ತು.