‘ಮಹಿಳಾ ಕಾಂಗ್ರೆಸ್ ನಡಿಗೆ- ಮತದಾರರ ಬಳಿಗೆ’; ಮತದಾರರ ಪಟ್ಟಿ ಪರಿಶೀಲನೆಗೆ ಮನೆಗೆ ಬರಲಿದ್ದಾರೆ ಮಹಿಳಾ ಕಾಂಗ್ರೆಸಿಗರು!

ಕಾಂಗ್ರೆಸ್
Published on

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಗೊಂದಲವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ತನ್ನ ಆಕ್ಷೇಪವನ್ನು ಹೋರಾಟಕ್ಕೆ ಸೀಮಿತಗೊಳಿಸದೇ ಖುದ್ದು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲು ತೀರ್ಮಾನಿಸಿದೆ.

‘ಮಹಿಳಾ ಕಾಂಗ್ರೆಸ್ ನಡಿಗೆ- ಮತದಾರರ ಬಳಿಗೆ’ ಎಂಬ ಕಾರ್ಯಕ್ರಮ ರೂಪಿಸಿದ್ದು, ಇದರ ಭಾಗವಾಗಿ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಹಿಳಾ ಘಟಕದ ಸದಸ್ಯರಿಗೆ ಸೂಕ್ತ ತರಬೇತಿ ನೀಡಿ, ತಂಡಗಳನ್ನು ರಚಿಸುತ್ತಿದ್ದು, ಅವರು ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಖಾತ್ರಿ ಪಡಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಪ್ರಸ್ತುತ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಕಾಂಗ್ರೆಸ್, ಬ್ಲಾಕ್, ವಾರ್ಡ್ ಮತ್ತು ಪಂಚಾಯಿತಿ ಅಧ್ಯಕ್ಷರಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮ ನಡೆಸಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಇಂತಹ ತರಬೇತಿ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ಮನೆ ಮನೆಗೆ ಭೇಟಿಕೊಟ್ಟು ಅಗತ್ಯ ಮಾಹಿತಿ ನೀಡುವುದು, ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ದೂರು ಸಲ್ಲಿಕೆಗೆ ಸಹಾಯ ಮಾಡುವುದು, ಹೊಸದಾಗಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಸಹಕರಿಸುವ ಕೆಲಸವನ್ನು ಈ ತಂಡಗಳು ಮಾಡಲಿವೆ. ಚುನಾವಣೆ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕೊನೆಗೊಳಿಸುವವವರೆಗೂ ಪಕ್ಷದ ಮಹಿಳಾ ಘಟಕದಿಂದ ರಾಜ್ಯಾದ್ಯಂತ ಈ ರೀತಿ ಪ್ರಯತ್ನ ನಡೆಯಲಿದ್ದು, ಪ್ರತಿ ಬೂತ್‌ನಲ್ಲಿಯೂ ಸಕ್ರಿಯವಾಗಿ ತೊಡಗಿಕೊಳ್ಳಲು ಪಕ್ಷ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net