ಗ್ರಾಮಸ್ಥರ ಮೇಲೆ ಸೇಡು ತೀರಿಸಿಕೊಳ್ಳಲು ಕುಡಿವ ನೀರಿನ ಟ್ಯಾಂಕ್​ಗೆ ವಿಷ ಹಾಕಿದ ಕಿಡಿಗೇಡಿ! ಮುಂದೇನಾಯ್ತು?

visha 2
Published on

ವಿಜಯನಗರ: ಹರಪನಹಳ್ಳಿ‌ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಏ.9ರ ತಡರಾತ್ರಿ ಕುಡಿವ ನೀರಿನ ಟ್ಯಾಂಕ್​ಗೆ ಕ್ರಿಮಿನಾಶಕ ಗುಳಿಗೆಯುಳ್ಳ ಬಾಟಲಿ ಹಾಕಿ ವಿಕೃತಿ ಮೆರೆದಿದ್ದವ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಚಿಗಟೇರಿ ಗ್ರಾಮದ ಶಿವನಯ್ಯನ ಕೆರೆಗೆ ಹೋಗುವ ಮಾರ್ಗದಲ್ಲಿರುವ ನೀರು ತುಂಬಿದ ಸಂಪಿಗೆ (ನೆಲ ಮಹಡಿ ಟ್ಯಾಂಕ್) ಮೆಕ್ಕೆಜೋಳಕ್ಕೆ ಹೊಡೆಯುವ‌‌ ಕ್ರಿಮಿನಾಶಕ ಗುಳಿಗೆಗಳುಳ್ಳ ಬಾಟಲಿಯನ್ನು ಕಿಡಿಗೇಡಿಯೊಬ್ಬ ರಾತ್ರೋರಾತ್ರಿ ಬಿಸಾಡಿದ್ದ. ಇದಕ್ಕೂ ಮುನ್ನ ಆತ ವಿಷದ ಬಾಟಲಿ ಹಿಡಿದುಕೊಂಡು ಆ ಗ್ರಾಮವೆಲ್ಲ ಸುತ್ತಾಡಿದ್ದನಂತೆ. ಘಟನೆ ಬಳಿಕ ಗ್ರಾಮಸ್ಥರು ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಹುಚ್ಚಾಪುರದ ಮಂಜುನಾಥ (50)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಕುಡಿವ ನೀರಿಗೆ ವಿಷ ಬೆರೆಸಿದ್ದು 'ಅವಮಾನಕ್ಕೆ ಪ್ರತೀಕಾರ' ತೀರಿಸಿಕೊಳ್ಳಲು ಅಂತೆ!

ಏ.10ರ ಬೆಳಗ್ಗೆ ಗ್ರಾಮಕ್ಕೆ ಎಂದಿನಂತೆ ನೀರುಗಂಟಿ ಸಿದ್ದೇಶ ನೀರು ಬಿಡುತ್ತಿದ್ದರು. ಈ ವೇಳೆ ವಾಸನೆ ಬಂದಿದ್ದು, ಅವರು ಸಂಪಿನ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ವಿಷದ ಬಾಟಲಿ ಇರುವುದು ಗೊತ್ತಾಗಿತ್ತು. ಕೂಡಲೇ ಗ್ರಾಮಸ್ಥರಿಗೆ ನೀರನ್ನು ಕುಡಿಯದಂತೆ ನೀರುಗಂಟಿ ಹೇಳಿದ್ದರಿಂದ ಗ್ರಾಮಸ್ಥರೆಲ್ಲರೂ ಸಂಗ್ರಹಿಸಿದ್ದ ನೀರನ್ನು ಹೊರ ಚೆಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ನೀರುಗಂಟಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿತ್ತು.

ವಿಷ ಹಾಕಿದ್ದು ಯಾರೆಂದು ಪೊಲೀಸರು ತನಿಖೆ ಶುರು ಮಾಡಿದಾಗ ಹುಚ್ಚಾಪುರದ ಮಂಜುನಾಥನ ಮೇಲೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಚಿಗಟೇರಿ ಗ್ರಾಮದಲ್ಲಿ ನಡೆಡ ಕಳ್ಳತನ ಪ್ರಕರಣದಲ್ಲಿ ತನಗೆ ಅವಮಾನ ಆಗಿತ್ತು. ಇದೇ ಕಾರಣಕ್ಕೆ ನೀರಿನ ಟ್ಯಾಂಕಿಗೆ ವಿಷ ಹಾಕಿರುವುದಾಗಿ ಆರೋಪಿ ಮಂಜುನಾಥ ಒಪ್ಪಿಕೊಂಡಿದ್ದಾನೆ.

ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹಾಗೂ ಚಿಗಟೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತನ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಲ್ಲಿ ಇಲ್ಲಿ ಕಳ್ಳತನ ಮಾಡಿ ಮಂಜುನಾಥ ಜೈಲಿಗೂ ಹೋಗಿಬಂದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net