

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಶಾಸಕರು ಸೇರ್ಪಡೆಗೊಂಡಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬಳಿಕ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ.ಮಾಧುಸ್ವಾಮಿ, ಅರಗಜ್ಞಾನೇಂದ್ರ, ಡಾ. ಅಶ್ವಥ ನಾರಾಯಣ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚೌಹ್ವಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ.ಪಾಟೀಲ್, ಬಸವರಾಜ ಬೈರತಿ, ಡಾ.ಕೆ.ಸುಧಾಕರ್, ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಕೆ.ಸಿ.ನಾರಾಯಣಗೌಡ, ಬಿ.ಸಿ.ನಾಗೇಶ್, ಸುನಿಲ್ ಕುಮಾರ್, ಆಚಾರ್ ಹಾಲಪ್ಪ ಬಸಪ್ಪ, ಶಂಕರ್ ಪಾಟೀಲ್ ಮುನೇನಕುಪ್ಪ, ಮುನಿರತ್ನ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಹುತೇಕರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು. ಪ್ರಭುಚೌವ್ಹಾಣ್ ಅವರು ದೇವರ ಮತ್ತು ಗೋಮಾತೆ ಹೆಸರಿನಲ್ಲಿ, ಮುರುಗೇಶ ನಿರಾಣಿ ಅವರು ದೇವರು ಮತ್ತು ರೈತರ ಹೆಸರಿನಲ್ಲಿ, ಶಿವರಾಂ ಹೆಬ್ಬಾರ್ ಅವರು ದೇವರ ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ, ಬಿ.ಸಿ. ಪಾಟೀಲ್ ಅವರು ರೈತರು ಮತ್ತು ಬಸವಣ್ಣ ಹೆಸರಿನಲ್ಲಿ, ಶಶಿಕಲಾ ಜೊಲ್ಲೆ ಅವರು ದೇವರ ಮತ್ತು ಕ್ಷೇತ್ರದ ಜನರ ಹೆಸರಿನಲ್ಲಿ, ಶಂಕರ್ ಪಾಟೀಲ್ ಮುನೇನಕುಪ್ಪ ಅವರು ದೇವರ ಮತ್ತು ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಹೊರಗಡೆ ಎಲ್ಇಡಿ ಪರದೆ ಅಳವಡಿಸಿ, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು. ರಾಜಭವನದ ಒಳಗೆ ಹೊಗಲಾಗದವರು ಎಲ್ಇಡಿ ಪರದೆ ಮೂಲಕ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಿಸುತ್ತಿದ್ದರು.