

ಬೆಂಗಳೂರು: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಸುರಪುರ ಶಾಸಕ ರಾಜೂಗೌಡ ಇಬ್ಬರೂ ಬಿ.ಎಸ್ ಯಡಿಯೂರಪ್ಪ ಮುಂದೆ ಕಣ್ಣೀರಿಟ್ಟಿದ್ದಾರೆ. ರೇಣುಕಾಚಾರ್ಯರು ಒಂದು ಹಂತದಲ್ಲಿ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.
ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ಕಾವೇರಿ ನಿವಾಸದಲ್ಲಿ ಬಿಎಸ್‌ವೈ ಅವರನ್ನು ಭೇಟಿ ಮಾಡಿದ ಉಭಯ ಶಾಸಕರು, ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಈ ವೇಳೆ ಭಾವುಕರಾಗಿದ್ದ ರೇಣುಕಾಚಾರ್ಯ, ಒಂದು ಹಂತದಲ್ಲಿ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೂ ಸಚಿವ ಸ್ಥಾನ ಕೈತಪ್ಪಿರುವುದು ಏಕೆ? ನಾನು ಮಾಡಿದ ತಪ್ಪಾದರೂ ಏನು? ಪಕ್ಷ ವಿರೋಧಿಗಳ ವಿರುದ್ಧ ಹೋರಾಟ ಮಾಡಿದ್ದೇ ತಪ್ಪಾ? ಎನ್ನುತ್ತಲೇ ಭಾವುಕರಾದರು. ಆಗ ಶಾಸಕರನ್ನ ಸಮಾಧಾನ ಪಡಿಸಲು ಮುಂದಾದ ಬಿಎಸ್‌ವೈ, ಎಲ್ಲವೂ ಮುಗಿದೇ ಹೋಯ್ತು ಅಂತಾ ಭಾವಿಸುವುದು ಬೇಡ. ಪಕ್ಷದಲ್ಲಿ ಮುಂದೆ ಒಳ್ಳೆಯ ಭವಿಷ್ಯವಿದೆ, ಉತ್ತಮ ಅವಕಾಶ ಸಿಗಲಿದೆ ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಈಗಲೂ ನಗುಮುಖದಲ್ಲೇ ಇದ್ದೀನಿ. ಜನತೆ ಮೂರು ಬಾರಿ ನನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರಕ್ಕೆ ಒಳ್ಳೆಯ ಗೌರವ ತರುವ ಕೆಲ್ಸ ಮಾಡಿದ್ದೀನಿ. ಕರೊನಾ ಸಮಯದಲ್ಲಿ ನಾನು ಮಾಡಿದ ಕೆಲ್ಸ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಜನ ನನ್ನನ್ನು ಆಯ್ಕೆ ಮಾಡಿದ್ದಾರೆ, ಅವರ ಜತೆ ಇರ್ತೀನಿ. ಕ್ಷೇತ್ರದಲ್ಲಿ ಕರೊನಾ ಮೂರನೇ ಅಲೆ ತಡೆಯೋ ಕೆಲ್ಸ ಮಾಡ್ತೀನಿ. ನಾನು ಸೇವಕನಾಗಿ ಇದೂವರೆಗೂ ಕೆಲ್ಸ ಮಾಡಿದ್ದೀನಿ ಎಂದರು.
ಸಚಿವ ಸ್ಥಾನ ಪಡೆಯಲು ನಾನು ಲಾಬಿ ಮಾಡಿಲ್ಲ. ಕಾಡಿ-ಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಯಾರು ಸಮರ್ಥರಿದ್ದಾರೋ ಅವ್ರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಸಹಿ ಸಂಗ್ರಹ ವಿಚಾರ ಮುಗಿದ ಅಧ್ಯಾಯ. ಮುಖ್ಯಮಂತ್ರಿ, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸುವೆ. ಅಧಿಕಾರದ ಹಿಂದೆ ಹೋಗುವ ವ್ಯಕ್ತಿ ನಾನಲ್ಲ. ಲಾಬಿ ಮಾಡುವುದಾಗಿದ್ರೆ ದೆಹಲಿಗೆ ಹೋಗಿ ಮಾಡ್ತಿದ್ದೆ. ದಾವಣಗೆರೆ ಜಿಲ್ಲೆಗೆ ಬಹಳ ಅನ್ಯಾಯವಾಗಿದೆ. ಐದು ಜನರ ಪೈಕಿ ಒಬ್ಬರಿಗಾದರೂ ಸಚಿವ ಸ್ಥಾನ ಕೊಡಬಹುದಿತ್ತು. ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಅರುಣ್ ಸಿಂಗ್ ಬಳಿ ಹೇಳಿದ್ದೀನಿ ಎಂದರು.