

ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಧಾಟಿ ನಿಗದಿಪಡಿಸಬೇಕೆಂಬ ಒಂದೂವರೆ ದಶಕದ ಬೇಡಿಕೆ ಕೊನೆಗೂ ಈಡೇರಿದೆ. ನಾಡಗೀತೆ 'ಜಯಭಾರತ ಜನನಿಯ ತನುಜಾತೆ..' ಹಾಡಿಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂದು ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನುಂದೆ ಎರಡು ನಿಮಿಷ ಮೂವತ್ತು ಸೆಕೆಂಡ್ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ. ನಾಡಗೀತೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ಪ್ರಸ್ತಾಪಕ್ಕೆ ಸಮ್ಮತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಇನ್ನು ಅಧಿಕೃತವಾಗಿ ಹಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಕುವೆಂಪು ಅವರು 1928ರಲ್ಲಿ 'ಜಯಭಾರತ ಜನನಿಯ ತನುಜಾತೆ...' ಹಾಡನ್ನು ರಚಿಸಿದ್ದರು. ಕುವೆಂಪು ಅವರು ರಚಿಸಿದ 'ಜಯ ಭಾರತ ಜನನಿಯ ತನುಜಾತೆ' ಗೀತೆಯನ್ನು ಆಯ್ದುಕೊಂಡಿದ್ದ ಅನಂತಸ್ವಾಮಿ, ರಾಜ್ಯಾದ್ಯಂತ ಕಾರ್ಯಕ್ರಮಗಳಲ್ಲಿ ಹಾಡಿ ಪ್ರಚುರಪಡಿಸಿದ್ದರು. ಈ ಗೀತೆಯನ್ನು 2004ರಲ್ಲಿ ನಾಡಗೀತೆ ಎಂದು ಸರ್ಕಾರ ಘೋಷಿಸಿತ್ತು. ಈ ಹಾಡನ್ನು ವಿವಿಧ ರಾಗದಲ್ಲಿ, ಐದರಿಂದ 9 ನಿಮಿಷಗಳವೆರೆಗೆ ಹಾಡಲಾಗುತ್ತಿದೆ. 2006ರಲ್ಲಿ ನಾಡಗೀತೆ ಹಾಡುವ ಸಮಯ ತುಂಬಾ ದೀರ್ಘವಾಗಿದೆ ಎಂಬ ದೂರು ಕೇಳಿ ಬಂದಿತ್ತು. ಹೆಚ್ಚಿನ ಏರಿಳಿತ, ಆಲಾಪಗಳಿಲ್ಲದ ಧಾಟಿಯಾದ್ದರಿಂದ ಅನಂತಸ್ವಾಮಿಯವರ ಧಾಟಿಯಲ್ಲಿ ಮಕ್ಕಳು, ವೃದ್ಧರ ಜತೆಗೆ ಸಂಗೀತ ತಿಳಿದಿಲ್ಲದವರೂ ಹಾಡುವಂತಿರಬೇಕು ಎಂದು ಸುಗಮಸಂಗೀತ ವಲಯದಲ್ಲಿ ಅಭಿಪ್ರಾಯವಿತ್ತು. ಖ್ಯಾತ ಗಾಯಕ ಸಿ. ಅಶ್ವತ್ಥ್ ಧಾಟಿಯೂ ನಂತರದಲ್ಲಿ ಪ್ರಸಿದ್ಧಿಯಾಗಿದ್ದರಿಂದ ಅದನ್ನು ಅಳವಡಿಸಿಕೊಳ್ಳಬೇಕು ಎಂದೂ ಅನೇಕರು ಆಗ್ರಹಿಸಿದ್ದರು.
ನಾಡಗೀತೆಗೆ ಧಾಟಿ ನಿಗದಿಪಡಿಸಬೇಕೆಂಬ ಅನೇಕ ವರ್ಷಗಳ ಆಗ್ರಹವಿದ್ದರೂ ನನೆಗುದಿಗೆ ಬಿದ್ದಿದ್ದ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಕಳೆದ ವರ್ಷ ಅಧಿಕಾರಿಗಳಿಗೆ ಸೂಚಿಸಿದ್ದರು. ಬಳಿಕ ನಾಡಗೀತೆಗೆ ಧಾಟಿ ಹಾಗೂ ಹಾಡುವ ಸಮಯವನ್ನು ನಿಗದಿಪಡಿಸಲು ಎಸ್. ಆರ್.ಲೀಲಾ ಅಧ್ಯಕ್ಷತೆಯಲ್ಲಿ 17 ಜನರ ಸಮಿತಿಯನ್ನು ಇಲಾಖೆ 2021ರ ಸೆ.9ರಂದು ರಚಿಸಿತ್ತು.
ನಾಡಗೀತೆ ಎಂದು ಘೋಷಣೆಯಾಗುವುದಕ್ಕೂ ಮೊದಲಿನಿಂದಲೇ ನಾಡಿನಾದ್ಯಂತ ಗೀತೆಯನ್ನು ಹಾಡಿ ಪ್ರಚುರಪಡಿಸಿದ್ದ ಅನಂತಸ್ವಾಮಿಯವರಿಗೆ ಗೌರವ ನೀಡುವುದರ ಜತೆಗೆ ಮಕ್ಕಳು, ವಯೋವೃದ್ಧರೆನ್ನದೆ ಎಲ್ಲರೂ ಹಾಡಬಹುದಾದ ಸರಳ ಧಾಟಿ ಎಂಬ ಕಾರಣಕ್ಕೆ ಖ್ಯಾತ ಸುಗಮ ಸಂಗೀತ ಗಾಯಕ ದಿವಂಗತ ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲಿ ಎರಡೂವರೆ ನಿಮಿಷಕ್ಕೆ ಹಾಡಬಹುದು ಎಂದು ರಾಜ್ಯ ಸರ್ಕಾರ ರಚಿಸಿದ್ದ 17 ಜನರ ಸಮಿತಿ ಸರ್ವಾನುಮತದ ಶಿಫಾರಸು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಇದಕ್ಕೆ ಅಸ್ತು ಎಂದಿದೆ.