More

    30 ಎಕರೆ ಭೂಮಿ, 7 ಮನೆ, 11 ಮಕ್ಕಳಿದ್ದರೂ ತಾಯಿಗಿಲ್ಲ ಆಸರೆ… ಕಣ್ಣೀರಿಡುತ್ತಲೇ ದಯಾಮರಣ ಬೇಡಿದ ಹಾವೇರಿಯ ಅಜ್ಜಿ

    ರಾಣೆಬೆನ್ನೂರ: ಈ ಅಜ್ಜಿಯ ವಯಸ್ಸು 75. ಇವರಿಗೆ 11 ಜನ ಮಕ್ಕಳಿದ್ದಾರೆ. ವಾಸಕ್ಕೆ ಬರೋಬ್ಬರಿ 7 ಮನೆ-ಪ್ಲ್ಯಾಟ್​ಗಳಿವೆ, 30 ಎಕರೆ ಜಮೀನಿದೆ. ಆದರೂ, ಈ ಅಜ್ಜಿ ತುಂಬಾ ಮನನೊಂದು ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

    ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ಔಷಧಕ್ಕೂ ಹಣವಿಲ್ಲದ ಕಾರಣ ಜೀವಂತ ಶವವಾಗಿ ನರಕಯಾತನೆ ಅನುಭವಿಸುತ್ತಿದ್ದೇನೆ. ಅಕ್ಕಪಕ್ಕದ ಮನೆಯಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿರುವುದನ್ನು ಕಂಡರೆ ಅಂತಹ ಪ್ರೀತಿ, ವಿಶ್ವಾಸ ನನಗೇಕೆ ಸಿಗುತ್ತಿಲ್ಲ? ಎನ್ನುವ ನೋವು ಕಾಡುತ್ತಿದೆ. ಮಾನಸಿಕ ನೆಮ್ಮದಿ ಇಲ್ಲವಾಗಿದೆ… ದೈಹಿಕವಾಗಿ ದುರ್ಬಲಳಾಗುತ್ತಿದ್ದೇನೆ. ನನಗೆ ನ್ಯಾಯ ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ… ದಯವಿಟ್ಟು ನನ್ನ ಮನವಿಯನ್ನು ಪರಿಗಣಿಸಲು ನಿಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ… ಎಂದು ರಾನೆಬೆನ್ನೂರಿನ ರಂಗನಾಥ ನಗರದ ನಿವಾಸಿ ಪುಟ್ಟವ್ವ ಹನುಮಂತಪ್ಪ ಕೊಟ್ಟೂರ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

    ನನಗೆ 7 ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಇವರ್ಯಾರೂ ನನ್ನನ್ನು ನೋಡಿಕೊಳ್ಳಲು ಮುಂದೆ ಬರುತ್ತಿಲ್ಲ. ಬದುಕಿನ ಬಂಡಿ ಸಾಗಿಸುವುದೇ ದುಸ್ತರವಾಗಿದೆ… ಎನ್ನುತ್ತ ಹಾವೇರಿ ಜಿಲ್ಲಾಡಳಿತ ಭವನದ ಕಟ್ಟೆಯ ಮೇಲೆ ಕಣ್ಣೀರಿಡುತ್ತ ಕುಳಿತಿದ್ದ ಪುಟ್ಟವ್ವ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮೂಲಕ ಗುರುವಾರ ರಾಷ್ಟ್ರಪತಿ ಅವರಿಗೆ ದಯಾಮರಣದ ಅರ್ಜಿ ರವಾನಿಸಿದರು.

    ಪತಿ ಹನುಮಂತಪ್ಪ ಮೃತಪಟ್ಟ ಬಳಿಕ 8 ವರ್ಷದಿಂದ ರಂಗನಾಥ ನಗರದಲ್ಲಿರುವ ಕಿರಿಯ ಮಗನ ಜತೆ ಪುಟ್ಟವ್ವ ಉಳಿದುಕೊಂಡಿದ್ದರು. ತಾಯಿಗೆ ಕೋವಿಡ್​ ಪಾಸಿಟಿವ್​ ಬಂದ ಕಾರಣ ಕಿರಿಯ ಮಗ 6 ಲಕ್ಷ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದ. ಆದರೀಗ ಆತನೂ ಸಾಲದ ಸುಳಿಗೆ ಸಿಲುಕಿದ್ದರಿಂದ ತಾಯಿಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸವಾಗಿದ್ದಾನೆ.

    ಇನ್ನು ಪುಟ್ಟವ್ವನ ಗಂಡನ ಹೆಸರಿನಲ್ಲಿ ದಾವಣಗೆರೆ ಜಿಲ್ಲೆಯ ನಾಗರಸನಹಳ್ಳಿಯಲ್ಲಿ 1.20 ಎಕರೆ ಹಾಗೂ ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿಯಲ್ಲಿ 1.35 ಎಕರೆ, ರಾಣೆಬೆನ್ನೂರ ತಾಲೂಕಿನ ಹುಲ್ಲತ್ತಿ ಗ್ರಾಮದ ಬಳಿ 28 ಎಕರೆ ಜಮೀನು ಮತ್ತು ನಗರ ಭಾಗದಲ್ಲಿ ಪ್ಲ್ಯಾಟ್​ಗಳಿವೆ. 28 ಎಕರೆ ಜಮೀನು ಹಾಗೂ ಪ್ಲ್ಯಾಟ್​ಗಳಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಆದರೆ, ನನ್ನ ಗಂಡನ ಹೆಸರಿನಲ್ಲಿರುವ ಜಮೀನನ್ನು ಮಕ್ಕಳು ನನಗೆ ಕೊಡುತ್ತಿಲ್ಲ. ನನ್ನ ಆರೈಕೆ ಮಾಡುತ್ತಿಲ್ಲ… ಎಂದು ಪುಟ್ಟವ್ವ ಕಣ್ಣೀರಿಟ್ಟಿದ್ದಾರೆ.

    ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

    ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts