More

    ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

    ಕಡೂರು: ಬಡತನವಿದ್ದರೂ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂಬ ಮಹದಾಸೆಯನ್ನ ಪಾಲಕರು ಹೊಂದಿದ್ದರು. ಅತ್ತ ತನ್ನ ಭವಿಷ್ಯಕ್ಕಾಗಿ ಕಷ್ಟಪಡುತ್ತಿರುವ ಪಾಲಕರನ್ನು ಭವಿಷ್ಯದಲ್ಲಿ ಉತ್ತಮ ಸ್ಥಿತಿಯಲ್ಲಿ ನೋಡಬೇಕು ಎಂದು ಮಗಳೂ ಕನಸು ಕಂಡಿದ್ದಳು. ಆದರೆ ವಿಧಿ ಇವರ ಬಾಳಲ್ಲಿ ಆಟವಾಡಿಬಿಟ್ಟಿದೆ… ಮಗಳು ಬಾರದ ಲೋಕಕ್ಕೆ ಹೋಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ನೋವಿನಲ್ಲೂ ಪಾಲಕರು ಮಗಳ ಅಂಗಾಂಗ ದಾನ ಮಾಡಿದ್ದು, ಸಾವಿನಲ್ಲೂ ಯುವತಿ ಸಾರ್ಥಕತೆ ಮೆರೆದಿದ್ದಾಳೆ.

    ಇಂತಹ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ. ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ಶೇಖರ್ ನಾಯ್ಕ ಮತ್ತು ಲಕ್ಷ್ಮೀಬಾಯಿ ದಂಪತಿಯ ಪುತ್ರಿ ಎಸ್.ಎಚ್. ರಕ್ಷಿತಾಬಾಯಿ(17) ಸಾವಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಚಿಕ್ಕಮಗಳೂರಿನ ಬಸವನಹಳ್ಳಿಯ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹಾಸ್ಟೆಲ್‌ನಲ್ಲಿದ್ದುಕೊಂಡೇ ಓದುತ್ತಿದ್ದ ಈಕೆ, ಊರಿಗೆ ವಾರಕ್ಕೊಮ್ಮೆ ಹಾಗೂ ಬಿಡುವು ಸಿಕ್ಕಾಗ ಬಂದು ಹೋಗುತ್ತಿದ್ದಳು.

    ಎಂದಿನಂತೆ ಸೆ.18ರಂದು ಚಿಕ್ಕಮಗಳೂರಿನ ಸಂಬಂಧಿಕರ ಮನೆಗೆ ಬಸ್ಸಿನಲ್ಲಿ ಹೊರಟಿದ್ದಳು. ಮಾರ್ಗಮಧ್ಯೆ ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಬಸ್‌ನಿಂದ ಆಯತಪ್ಪಿ ಬಿದ್ದ ರಕ್ಷಿತಾಬಾಯಿ ತಲೆಗೆ ಗಂಭೀರ ಪೆಟ್ಟಾಗಿತ್ತು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಿದುಳು ನಿಷ್ಕ್ರಿಯಗೊಂಡಿದೆ, ಇನ್ನು ಮಗಳು ಬದುವುದಿಲ್ಲ ಎಂಬ ಸುದ್ದಿ ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ನೋವಿನಲ್ಲೂ ದೃಢ ನಿರ್ಧಾರ ತೆಗೆದುಕೊಂಡ ಪಾಲಕರು, ವೈದ್ಯರ ಸಲಹೆ ಮೇರೆಗೆ ಮಗಳ ಕಣ್ಣು, ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್​ ದಾನ ಮಾಡಲು ಬುಧವಾರ ಒಪ್ಪಿಗೆ ಸೂಚಿಸಿದರು.

    ಬೆಂಗಳೂರು, ಚೆನ್ನೈಯಿಂದ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಗುರುವಾರ ಬೆಳಗ್ಗೆ ಆಗಮಿಸಿರುವ ನುರಿತ ವೈದ್ಯರ ತಂಡ, ರಕ್ಷಿತಾಳ ಅಂಗಾಂಗಗಳನ್ನು ಪಡೆದು ಅಗತ್ಯ ಇರುವ ರೋಗಿಗಳಿಗೆ ರವಾನಿಸುವ ಕೆಲಸ ಮಾಡಿದೆ.

    ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ನನ್ನ ತಂಗಿ ದೈಹಿಕವಾಗಿ ಇಲ್ಲದಿದ್ದರೂ ಅವಳ ಅಂಗಾಂಗಳು ಬೇರೆಯವರಿಗೆ ಜೀವ ನೀಡಲಿವೆ. ಆ ಮೂಲಕ ಅವಳು ಇದ್ದಾಳೆ ಎಂದು ತೃಪ್ತಿಪಟ್ಟುಕೊಳ್ಳುತ್ತೇವೆ ಎನ್ನುತ್ತಲೇ ಕಣ್ಣೀರಿಟ್ಟರು ರಕ್ಷಿತಾಳ ಅಣ್ಣ ಅಭಿನಂದನ್.

    ಎಲ್ಲರೊಂದಿಗೂ ಸ್ನೇಹಜೀವಿಯಾಗಿ ಬೆರೆಯುತ್ತಿದ್ದ ರಕ್ಷಿತಾಳ ಹಠಾತ್ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಇನ್ನು ಕಾಲೇಜಿನಲ್ಲೂ ಆಕೆಯ ಸಹಪಾಠಿಗಳೂ ದುಃಖಿಸುತ್ತಿದ್ದಾರೆ.

    ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

    ನಾಳೆ ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ಏಕವಚನದಲ್ಲಿ ಮಾತಾಡಿ ಎಚ್​ಡಿಕೆಯನ್ನು ಕೆಣಕಿದ ಸಚಿವರಿಗೆ ಕಾದಿದ್ಯಾ ಗಂಡಾಂತರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts