ಆಂಬುಲೆನ್ಸ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಬಗ್ಗೆ ರಾಜ್ಯದ ಜನರಿಗೆ ಆತಂಕ ಬೇಡ, ಪೂರಕ ಕ್ರಮ ಕೈಗೊಳ್ಳಲಾಗಿದೆ: ಡಾ.ಸುಧಾಕರ್​

sudhakar
Published on

ಬೆಂಗಳೂರು: '108 -ಆಂಬುಲೆನ್ಸ್ ಸೇವೆಗಳ ಸಹಾಯವಾಣಿ'ಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೂರಕ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಜನರು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ತುರ್ತುಪರಿಸ್ಥಿತಿಯ ಆಪದ್ಬಾಂಧವ ಎನಿಸಿಕೊಂಡಿರುವ ಆಂಬುಲೆನ್ಸ್​ ಸೇವೆಯು ರಾಜ್ಯಾದ್ಯಂತ ನಿನ್ನೆ (ಶನಿವಾರ) ರಾತ್ರಿಯಿಂದಲೇ ಸೇವೆ ಸ್ಥಗಿತವಾಗಿತ್ತು. ಸಹಾಯವಾಣಿ ನಂಬರ್​ 108ಕ್ಕೆ ಕರೆ ಮಾಡಿದರೆ ಯಾರೂ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿದರು ಸಚಿವ ಸುಧಾಕರ್​, ಐಟಿ ಹಾರ್ಡ್‌ವೇರ್‌ನಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದು, ಅದನ್ನು ಗುತ್ತಿಗೆ ಪಡೆದುಕೊಂಡಿರುವ GVK-EMRI ಸಂಸ್ಥೆ ಶೀಘ್ರದಲ್ಲೇ ಬಗೆಹರಿಸಲಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಅನ್ನುವ ನಿಟ್ಟಿನಲ್ಲಿ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 108 -ಸಹಾಯವಾಣಿ ಕರೆಗಳು ಆಟೋಮ್ಯಾಟಿಕ್ ಆಗಿ ಕರೆಗಳನ್ನು ಸ್ವೀಕರಿಸಿ 2 ನಿಮಿಷಗಳಲ್ಲಿ ಆಂಬುಲೆನ್ಸ್ ವಾಹನ ಹಂಚಿಕೆ ಕಾರ್ಯ ಮಾಡುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದ ಈಗ ಈ ಪ್ರಕ್ರಿಯೆಗೆ 6 ರಿಂದ 7 ನಿಮಿಷಗಳ ಕಾಲ ತೆಗೆದುಕೊಳ್ಳಲಾಗುತ್ತಿದೆ. ಪ್ರತಿದಿನ 7 ರಿಂದ 8 ಸಾವಿರ ಕರೆಗಳ ಬದಲು 2 ರಿಂದ 2.5 ಸಾವಿರ ಕರೆಗಳನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದ್ದಾರೆ.

ಈಗಾಗಲೇ ಎಲ್ಲ ಆಸ್ಪತ್ರೆಗಳಿಗೆ ಇಂಟರ್ ಫೆಸಿಲಿಟಿ ಟ್ರಾನ್ಸ್‌ಫರ್‌ಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ. ಆಂಬುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳಿಗೂ ಕರೆ ಬಂದರೆ ಸ್ವೀಕರಿಸಿ ಅಗತ್ಯ ಸೇವೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಮ್ಯಾನ್ಯುವಲ್ ಐಡಿಗಳನ್ನು ಕ್ರಿಯೇಟ್ ಮಾಡಿ ಆ ಮೂಲಕವೂ ಜನರಿಗೆ ತುರ್ತು ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ತುರ್ತು ಸೇವೆ ಒದಗಿಸುವ 112 ಸಹಾಯವಾಣಿಯಲ್ಲಿರುವ 2-3 ಸಿಬ್ಬಂದಿ ಬದಲು ಅಲ್ಲಿಗೆ 7-8 ಸಿಬ್ಬಂದಿ ನಿಯೋಜನೆ ಮಾಡಲು ಸೂಚಿಸಲಾಗಿದೆ. ಈ ಮೂಲಕ 108 ಸಹಾಯವಾಣಿಯ ತಂಡದ ಮುಖ್ಯಸ್ಥರಿಗೆ ಕರೆಗಳನ್ನು ಡೈವರ್ಟ್ ಮಾಡಿ ಆ ಮೂಲಕ ಮ್ಯಾನ್ಯುವಲ್ ಐಡಿ ಜನರೇಟ್ ಮಾಡಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜತೆಗೆ 104- ಸಹಾಯವಾಣಿಯನ್ನು ಕೂಡ ಬಳಸಿಕೊಂಡು 108 ಸಹಾಯವಾಣಿ ಮೇಲಿನ ಒತ್ತಡ ಕಡಿಮೆ ಮಾಡಲಾಗುತ್ತಿದೆ. ಮಿಸ್ಡ್ ಕಾಲ್‌ಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, 108 ಸಹಾಯವಾಣಿಯಲ್ಲಿರುವ ಏಜೆಂಟ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net