ನಾಲ್ವರು ಮಕ್ಕಳನ್ನು ಮೃತ್ಯು ಕೂಪಕ್ಕೆ ತಳ್ಳಿದ ಅಪ್ಪ! ಮೈ ಮೇಲೆ ಏನೋ ಬಂದಂತಾಗಿ ಕೊಲೆ ಮಾಡಿದೆ ಎಂದ ಪಾಪಿ

murder1
Published on

ಪಟನಾ: ತಂದೆಯೊಬ್ಬ ತನ್ನ ನಾಲ್ವರು ಮುದ್ದಾದ ಮಕ್ಕಳನ್ನೇ ಕೊಲೆ ಮಾಡಿರುವ ಘಟನೆ ಬಿಹಾರದ ಸಿವಾನ್​ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಆತನ ಹೆಂಡತಿ ಮತ್ತು ಓರ್ವ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅವದೇಶ್​ ಚೌಧರಿ ಕೊಲೆ ಮಾಡಿರುವ ತಂದೆ. ಇತ್ತೀಚೆಗೆ ತರಕಾರಿ ತರಲೆಂದು ಮಾರುಕಟ್ಟೆಗೆ ಹೋದ ಈತ ಹರಿತವಾದ ಚಾಕುವೊಂದನ್ನು ಕೊಂಡು ಬಂದಿದ್ದಾನೆ. ಮನೆಗೆ ಬಂದವನೆ ತನ್ನ ಮಕ್ಕಳಾದ ಅಭಿಷೇಕ್​ (14), ಮುಕೇಶ್​ ಕುಮಾರ್​ (10), ಭೋಲಾ ಕುಮಾರ್​ (12) ಮತ್ತು ಮಗಳು ಜ್ಯೋತಿ (18)ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನೊಬ್ಬ ಮಗಳು ಮತ್ತು ಹೆಂಡತಿಯ ಮೇಲೂ ಹಲ್ಲೆ ನಡೆಸಿದ್ದಾನಾದರೂ ತಪ್ಪಿಸಿಕೊಂಡಿರುವ ಅವರಿಬ್ಬರು ಇದೀಗ ಪಾಟ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಚಾರ ತಿಳಿದ ತಕ್ಷಣ ಪೊಲೀಸರು ಅವದೇಶ್​ನನ್ನು ವಶಕ್ಕೆ ಪಡೆದಿದ್ದಾರೆ. ಈತ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳದ ಹಿನ್ನೆಲೆ ಸ್ಥಿಮಿತ ಕಳೆದುಕೊಂಡಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.

ಮಾರುಕಟ್ಟೆಯಿಂದ ಮನೆಗೆ ವಾಪಾಸಾಗುವಾಗ ನನ್ನ ಮೇಲೆ ಯಾರೋ ಅತಿಕ್ರಮಿಸಿದ ಹಾಗಾಯಿತು. ಯಾರೋ ಕೊಲೆ ಮಾಡು ಎಂದು ನೂಕಿದಂತಾಯಿತು. ಮನೆಗೆ ಹೋಗಿ ಏನು ಮಾಡಿದೆ ಎನ್ನುವುದು ನನಗೇ ಗೊತ್ತಿಲ್ಲ ಎಂದು ಅವದೇಶ್​ ಹೇಳಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net