

ಚಿತ್ರದುರ್ಗ: ನಮ್ಮ ಮೈ ಮೇಲೆ ದೇವರು ಬರುತ್ತೆ. ಈ ಬಾಲಕಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸ್ತೀವಿ ಎನ್ನುತ್ತಾ ಮೂರು ವರ್ಷದ ಬಾಲಕಿಗೆ ಬೆತ್ತದಿಂದ ಮನಸೋಇಚ್ಛೆ ಹೊಡೆದು ಕೊಲೆಗೈದ ಇಬ್ಬರು ವಾಮಾಚಾರಿ ಸಹೋದರರಿಗೆ ಕೊನೆಗೂ ತಕ್ಕ ಶಿಕ್ಷೆಯಾಗಿದೆ.
ಹೊಳಲ್ಕೆರೆ ತಾಲೂಕು ಅಜ್ಜಿ ಕ್ಯಾತನಹಳ್ಳಿ ನಿವಾಸಿ ಪ್ರವಿಣ್ ಅವರ ಪುತ್ರಿ ಮೂರು ವರ್ಷದ ಪೂರ್ವಿಕಾಳನ್ನು ಮೈಮೇಲೆ ದೇವರು ಬರುತ್ತೆ, ದೆವ್ವ ಬಿಡಿಸುತ್ತೇವೆ ಎನ್ನುತ್ತಾ ಮೌಢ್ಯಾಚಾರಣೆ, ವಾಮಾಚಾರಗಳೊಂದಿಗೆ ಜನರಲ್ಲಿ ಸಲ್ಲದ ಭಯ ಉಂಟು ಮಾಡುತ್ತಿದ್ದರು. ವಿಪರೀತ ಹಠ ಮಾಡುತ್ತಿದ್ದ ಪೂರ್ವಿಕಾಳನ್ನು ಸರಿ ಮಾಡುತ್ತೇವೆ ಎಂದು ಹೇಳಿ, ತಂದೆ-ತಾಯಿಯೊಂದಿಗೆ 2020ರ ಸೆಪ್ಟೆಂಬರ್ 27ರಂದು ತಮ್ಮ ಗುಡಿಸಿಲಿಗೆ ಕರೆಸಿಕೊಂಡು ಆಕೆಗೆ ಬಾಸುಂಡೆ ಬರುವಂತೆ ಥಳಿಸಿದ್ದರು. ಅಸ್ವಸ್ಥಳಾಗಿದ್ದ ಬಾಲಕಿ ಅಸುನೀಗಿದ್ದಳು.
ಚಿಕ್ಕಜಾಜೂರು ಪೊಲೀಸರು ಆರೋಪಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಹೊಳಲ್ಕೆರೆ ಸಿಪಿಐ ಕೆ.ಎನ್. ರವೀಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಒಂದು ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶ್ ನಾಯ್ಕ ವಾದಿಸಿದ್ದರು. ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಬಳಿಕ ಜಿಲ್ಲೆಯಲ್ಲಿ ನಡೆದ ಪ್ರಥಮ ಘಟನೆ ಇದಾಗಿದ್ದು, ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.