

ಮಂಡ್ಯ: ಸಾಮಾನ್ಯವಾಗಿ ಹಬ್ಬಗಳಲ್ಲಿ ರಿಯಾಯಿತಿ ನೀಡುವುದನ್ನು ನೋಡಿರುತ್ತೀರಿ. ಆದರೆ, ನೀಲಿ ಸಿನಿಮಾ ತಾರೆ ಸನ್ನಿ ಲಿಯೋನ್ರ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್ ನೀಡುವ ಮೂಲಕ ಗಮನ ಸೆಳೆದಿದ್ದಾನೆ.
ಮಂಡ್ಯ ನಗರದ ಕರ್ನಾಟಕ ಬಾರ್ ವೃತ್ತದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್, ತನ್ನ ಅಂಗಡಿಯಲ್ಲಿ ಚಿಕನ್ ಖರೀದಿಸುವ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಶೇ.10 ಡಿಸ್ಕೌಂಟ್ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾನೆ. ಸುಮ್ಮನೆ ಬಂದು ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ, ಬದಲಿಗೆ ಮೂರು ಪ್ರಮುಖ ಷರತ್ತು ಪೂರೈಸಬೇಕು.
ಸಾಮಾಜಿಕ ಜಾಲತಾಣ ಫೆಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಅವರನ್ನು ಫಾಲೋ ಮಾಡುತ್ತಿರಬೇಕು, ತಮ್ಮ ಮೊಬೈಲ್ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು, ಅವರ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್ ಮಾಡಿರಬೇಕೆಂದು ಷರತ್ತು ಹಾಕಲಾಗಿದೆ. ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ಡಿಸ್ಕೌಂಟ್ ನೀಡಲಾಗುತ್ತದೆ. ಸದ್ಯ ಈ ಫಲಕ ವೈರಲ್ ಆಗುತ್ತಿದೆ.