

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ವೇಳೆ ಗಲಾಟೆ ನಡೆದಿದ್ದು, ಭಾರೀ ಗದ್ದಲದ ನಡುವೆಯೇ ಅಂತ್ಯಕ್ರಿಯೆ ನೆರವೇರಿದೆ.
ಸಂತೋಷ್ ಪಾಟೀಲ್ರ ಸ್ವಂತ ಜಮೀನಿನಲ್ಲೇ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ಮೃತದೇಹ ತಂದಿದ್ದರು. ಈ ವೇಳೆ ಮೃತನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸುತ್ತಾ ಕಾಂಗ್ರೆಸ್ ನಾಯಕರು ಸಂತೋಷ್ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಪರಿಹಾರ ಘೋಷಣೆ ಮಾಡೊವರೆಗೂ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಹಾಗೂ ಮೃತನ ಕುಟುಂಬಸ್ಥರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದಕ್ಕೆ ಆಕ್ಷೇಪಿಸಿದ ಸಂತೋಷ್ ಮಾವ, ಸಾವಿನ ಮನೆಯಲ್ಲಿ ರಾಜಕೀಯ ಮಾಡಬೇಡಿ. ಸಂತೋಷ್ ಚಿಕ್ಕವನಿರುವಾಗ ನಾವು ಬೆಳೆಸಿದ್ದೇವೆ. ಮೊದಲು ಅಂತ್ಯಕ್ರಿಯೆ ಮಾಡೋಣ. ನಂತರ ಹೋರಾಟ ಮಾಡೋಣ ಎಂದರು.
ಒತ್ತಾಯ ಪೂರ್ವಕವಾಗಿ ಜೆಸಿಬಿಯಿಂದ ಮಣ್ಣು ಹಾಕಲು ಯತ್ನಿಸಿದಾಗ ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಅಡ್ಡಿಪಡಿಸಲು ಮುಂದಾದರು. ಅಡಿವೇಶ ಇಟಗಿ ಅವರನ್ನು ಸ್ಥಳೀಯರು ಒತ್ತಾಯ ಪೂರ್ವಕವಾಗಿ ಆ ಕಡೆ ಎಳೆದೊಯ್ದರು. ಕೊನೆಗೂ ಜೆಸಿಬಿ ಮುಖಾಂತರ ಪಾರ್ಥೀವ ಶರೀರದ ಮೇಲೆ ಮಣ್ಣು ಹಾಕಿ ಅಂತ್ಯಕ್ರಿಯೆ ಮಾಡಲಾಯಿತು.