ಸಂತೋಷ್​ ಆತ್ಮಹತ್ಯೆ: 2 ಕೋಟಿ ರೂ. ಪರಿಹಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಡಿಮಾಂಡ್​

eshwarappa
Published on

ಬೆಂಗಳೂರು: ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣವನ್ನೂ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆಗ್ರಹಿಸಿದ್ದಾರೆ.

ಗುತ್ತಿಗೆದಾರ ಸಂತೋಷ್​ ಸಾವಿಗೆ ಸರ್ಕಾರವೇ ನೇರ ಹೊಣೆ. ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳುವ ಬದಲು ಪರಿಹಾರ ನೀಡಬೇಕು. ಸಾವಿಗೆ ಯಾರು ಕಾರಣ ಅಂತ ಡೆತ್​ನೋಟ್​ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 40% ಕಮಿಷನ್ ಕೇಳುತ್ತಿದ್ದಾರೆ ಅಂತ ಸಚಿವ ಈಶ್ವರಪ್ಪರ ವಿರುದ್ಧ ಸಂತೋಷ್​ ಆರೋಪ ಮಾಡಿದ್ದರು. ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೂ ದೂರು ಸಲ್ಲಿಸಿದ್ದರು. ದೆಹಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನೆ ಮಾಡಿದ್ದರೆ ಸಂತೋಷ್​ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಒಂದು ಜೀವ ಬಲಿಯಾಗುತ್ತಿರಲಿಲ್ಲ ಎಂದು ಕೆಂಪಣ್ಣ ಆಕ್ರೋಶ ಹೊರಹಾಕಿದರು.

ಟೆಂಡರ್ ಕರೆಯೋಕೆ 5% ಕಮಿಷನ್ ಕೊಡ್ಬೇಕು. ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೀತಾ ಇದೆ. ನೀರಾವರಿ ಇಲಾಖೆಯಲ್ಲೂ ಕಮಿಷನ್​ ದಂಧೆ ಹೆಚ್ಚಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ 4 ಬಾರಿ ದೂರು ಕೊಟ್ಟೆವು. ಆದರೂ ಪ್ರಯೋಜನವಾಗಿಲ್ಲ. ಆರೋಗ್ಯ ಇಲಾಖೆ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net