

ಹೊಸಪೇಟೆ: ತುಂಗಭದ್ರಾ ಜಲಾಶಯದ ಹೊರಹರಿವು ಯಥಾಸ್ಥಿತಿಯಲ್ಲಿದ್ದರೂ, ಹಂಪಿ, ಕಂಪ್ಲಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಹಂಪಿಯಲ್ಲಿ ನದಿ ಪಾತ್ರದಲ್ಲಿರುವ ದೇವಸ್ಥಾನಗಳು ಜಾಲವೃತಗೊಂಡಿವೆ.
ತುಂಗಭದ್ರಾ ಜಲಾಶಯದಿಂದ ಸದ್ಯ 1.53 ಲಕ್ಷ ಕ್ಯೂಸೆಕ್ ನೀರು ಹೊರ ಬಿಡುಗಡೆ ಮಾಡಲಾಗುತ್ತಿದೆ. ಭಾನುವಾರ ಬೆಳಗ್ಗೆ 8 ಗಂಟೆ ವರೆಗೆ 1,48,139 ಕ್ಯೂಸೆಕ್ ಇದ್ದ ಹೊರ ಹರಿವು ಕೆಲವೇ ಗಂಟೆಗಳಲ್ಲಿ 5,757 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯ ಒಟ್ಟು 1633 ಅಡಿ ಎತ್ತರವಿದ್ದು, ಇಂದಿನ ನೀರಿನ ಮಟ್ಟ 1630.56 ಅಡಿಗೆ ತಲುಪಿದೆ. 105.788 ಟಿಎಂಸಿ ಸಾಮರ್ಥ್ಯದಲ್ಲಿ 96.191 ಟಿಎಂಸಿ ನೀರು ಸಂಗ್ರಹಿಸಲಾಗಿದೆ. 1,65,940 ಕ್ಯೂಸೆಕ್ ಒಳ ಹರಿವು ದಾಖಲಾಗಿದ್ದು, 1,53,896 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಹಂಪಿಯಲ್ಲಿ ನದಿ ಪಾತ್ರದಲ್ಲಿರುವ ಪುರಂದರ ಮಂಟಪ, ಯಂತ್ರೋದ್ಧಾರಕ ಚಕ್ರತೀರ್ಥರ ಸಾಲು ಮಂಟಪ, ಸ್ನಾನಘಟ್ಟ, ಅರಳಿ ಕಟ್ಟೆ ಜಲಾವೃತಗೊಂಡಿವೆ. ಕಂಪ್ಲಿ ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿವೆ. ಹೂವಿನಹಡಗಿ ತಾಲೂಕಿನ ಮದಲಗಟ್ಟಿ ಆಂಜನೇಯ ದೇವಸ್ಥಾನವೂ ಜಲದಿಗ್ಭಂಧನಕ್ಕೆ ಒಳಗಾಗಿದೆ.