ಇದು ಕೋವಿಡ್ ಲಾಕ್​ಡೌನ್ ಅಲ್ಲ, ಬಿಜೆಪಿ ಲಾಕ್​ಡೌನ್! ಮೋದಿ ರ‍್ಯಾಲಿ ಬಗ್ಗೆ ಏನೇಳ್ತಾರೆ? ಡಿಕೆಶಿ ಆಕ್ರೋಶ

DKshi
Published on

ಬೆಂಗಳೂರು: ಕೋವಿಡ್ ಪಾಸಿಟಿವ್ ಯಾರ್ ಯಾರಿಗೆ ಆಯ್ತು ಅಂತ ತಿಳಿಸಿದ್ರೆ ನಾವು ಆ ರೋಗಿಯನ್ನ ಮೀಟ್ ಮಾಡುತ್ತೇವೆ. ಇದು ಕೋವಿಡ್ ಲಾಕ್​ಡೌನ್ ಅಲ್ಲ, ಬಿಜೆಪಿ ಲಾಕ್​ಡೌನ್. ಯಾವ ಕರ್ಫ್ಯೂ ಇಲ್ಲ, ರಾಜಕೀಯ ಟಫ್ ರೂಲ್ಸ್ ತರ್ತಿದ್ದಾರೆ ಅಷ್ಟೆ. ಇವರಿಗೊಂದು ರೂಲ್ಸ್, ನಮಗೊಂದು ರೂಲ್ಸ್ ಯಾಕೆ? ನರೇಂದ್ರ ಮೋದಿ ಅವರು ರ‍್ಯಾಲಿ ಮಾಡಿದ್ರು ಅದಕ್ಕೇನು ಹೇಳ್ತಾರೆ?... ಇದು ಪಕ್ಕಾ ಬಿಜೆಪಿ ಕರ್ಫ್ಯೂ-ಬಿಜೆಪಿ ಲಾಕ್​ಡೌನ್...

ರಾಜ್ಯ ಸರ್ಕಾರವನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ತರಾಟೆಗೆ ತೆಗೆದುಕೊಂಡ ಪರಿ ಇದು. ಕರೊನಾ ಮತ್ತು ಒಮಿಕ್ರಾನ್​ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಮಂಗಳವಾರ ರಾತ್ರಿ ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಟೈಟ್​ ರೂಲ್ಸ್​ ಜಾರಿ ಮಾಡಿದೆ. ಪರಿಣಾಮ ಕಾಂಗ್ರೆಸ್​ನ ಮಹತ್ವಕಾಂಕ್ಷೆಯ ಮೇಕೆದಾಟು ಪಾದಯಾತ್ರೆಗೆ ಕರೊನಾ ನಿಯಮಾವಳಿ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆ ತೀವ್ರ ಅಸಮಾಧಾನ ಹೊರಹಾಕಿದ ಡಿಕೆಶಿ, ಬೆಂಗಳೂರಿನ ಜನರಿಗೆ, ನಾವು ರ‍್ಯಾಲಿ ಮಾಡುವುದಿಲ್ಲ, ಧರಣಿ ಮಾಡುವುದಿಲ್ಲ. ಕುಡಿವ ನೀರಿಗಾಗಿ ನಡಿಗೆ ಮಾಡುತ್ತೇವೆ ಅಷ್ಟೆ. ರೈತರಿಗೆ ಪ್ರಾರ್ಥನೆ ಮಾಡುತ್ತೇನೆ. ನಾಯಕರ ಬಳಿ ಮಾತಾಡುತ್ತೇನೆ, ಬೆಂಗಳೂರು ಶಾಸಕರ ಜತೆ ಮಾತಾಡುತ್ತೇನೆ. ಮೇಕೆದಾಟು ಪಾದಯಾತ್ರೆ ಹೆಸರು ಬದಲಾವಣೆ ಮಾಡಿಕೊಂಡು ನೀರಿಗಾಗಿ ನಡಿಗೆ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಯಾರೂ ಓಡಾಡಲ್ವಾ? ಅವರ್ಯಾರೂ ಓಡಾಡಲ್ವಾ? ಅವರ ಕಡೆಯವರು ಓಡಾಡಲ್ವಾ? ನಾವು ನೆಡೆಯುತ್ತೇವೆ. ನೀರಿಗಾಗಿ ನಡಿಗೆ ಎಂದು ಹೋಗುತ್ತೇವೆ ಎಂದರು.

ಯಾವ ಕರ್ಫ್ಯೂ ಇಲ್ಲ, ರಾಜಕೀಯ ಟಫ್ ರೂಲ್ಸ್ ತರ್ತಿದ್ದಾರೆ. ಅದಕ್ಕಾಗಿ ಅವರು ಆಫೀಸರ್‌ಗಳ ಕೈನಲ್ಲಿ ಬರೆಸಿದ್ದಾರೆ. ಕೋವಿಡ್ ಪಾಸಿಟಿವ್ ಯಾರ್ ಯಾರಿಗೆ ಆಯ್ತು ಅಂತ ತಿಳಿಸಿದ್ರೆ ನಾವು ಆ ಪೇಶೆಂಟ್ ಮೀಟ್ ಮಾಡುತ್ತೇವೆ. ವರ್ತಕರು, ಡ್ರೈವರ್, ಬೀದಿ ವ್ಯಾಪಾರಿಗಳಿಗೆ ಟಫ್​ ರೂಲ್ಸ್​ ನೆಪದಲ್ಲಿ ಸಾಯಿಸುತ್ತಿದ್ದಾರೆ. ನನ್ನ ಮೇಲೆ, ಸಿಎಲ್​ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಕೇಸ್ ಹಾಕಿದ್ದಾರೆ. ಮೊದಲು ನನ್ನ ಬ್ರದರ್ ಸುಧಾಕರ್​ ಸ್ವಿಮಿಂಗ್ ಪೂಲ್​ನಲ್ಲಿ ಸ್ವಿಮ್ ಮಾಡಿದ್ರಲ್ಲ, ಅವರ ಮೇಲೆ ಕೇಸ್ ಹಾಕಿ. ಸಿಎಂ ಬೊಮ್ಮಾಯಿ ಅವರು ಕಾರ್ಯಕ್ರಮ ಮಾಡಿದ್ರಲ್ಲ ಅವರ ಮೇಲೆ ಕೇಸ್​ ಹಾಕಿ. ಯಡಿಯೂರಪ್ಪ ಅವರು ಅಷ್ಟೊಂದು ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ರಲ್ಲ, ಅವರ ಮೇಲೆ ಕೇಸ್ ಹಾಕಿ... ಎಂದು ಡಿಕೆಶಿ ವ್ಯಂಗ್ಯವಾಡಿದರು.

ಜ.9ರಿಂದ ಮೇಕೆದಾಟುವಿನಿಂದ ಪಾದಯಾತ್ರೆ ಹೊರಡಲಿದ್ದು, ವಿವಿಧ ನಗರಗಳ ಮೂಲಕ ಬೆಂಗಳೂರು ತಲುಪುವ ಯೋಜನೆ ರೂಪಿತವಾಗಿತ್ತು. ಇದೀಗ ಎರಡು ವಾರಗಳಿಗೆ ಅನ್ವಯವಾಗುವಂತೆ ಕೋವಿಡ್ ಕಟ್ಟುನಿಟ್ಟಿನ ನಿಯಮಾವಳಿ ಆದೇಶ ಹೊರಬಿದ್ದಿದೆ. ಹೀಗಾಗಿ ಪಾದಯಾತ್ರೆ ನಡೆಸಿದರೆ ನಿಯಮಾವಳಿ ಉಲ್ಲಂಘಿಸಿದಂತಾಗುತ್ತದೆ. ಡಿಕೆಶಿ ಅವರ ಮುಂದಿನ ನಡೆ ಏನೆಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net