

ಕೊಪ್ಪಳ: ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ಮತ್ತು ಕನಕಗಿರಿ ಸಿಡಿಪಿಒ ಮಹಿಳಾ ಅಧಿಕಾರಿ ಇಬ್ಬರ ನಡುವಿನ ಫೋನ್ ಸಂಭಾಷಣೆ ವೈರಲ್ ಆಗಿದ್ದು, ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಅದು ಕರುಳ ಬಳ್ಳಿಯ ಜಗಳ. ಅಕ್ಕನ ಮಗಳೋ, ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ ಎಂದಿದ್ದಾರೆ.
ದಿಗ್ವಿಜಯ ನ್ಯೂಸ್ಗೆ ಪ್ರತಿಕ್ರಿಯಿಸಿದ ಶಾಸಕರು, ಮಹಿಳಾ ಅಧಿಕಾರಿ ನನ್ನ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಿಲ್ಲ. ನಾವೇನು ಕೆಟ್ಟದ್ದಾಗಿ ಮಾತನಾಡಿಲ್ಲ. ನಮ್ಮಿಬ್ಬರ ಕರುಳ ಬಳ್ಳಿಯ ಜಗಳ ಅದು. ಅಕ್ಕನ ಮಗಳೋ, ಮಾವನ ಮಗನೋ ಎಂಬಂತೆ ಜಗಳ ಆಗಿದೆ. ಸಿಡಿಪಿಒ ಬಂದು ಮೀಡಿಯಾ ಜತೆ ಮಾತಾಡಿದ್ದಾರೆ ಅಂತಾನೂ ಇಲ್ಲ. ಎಲ್ಲಾದರೂ ಪಂಚಾಯಿತಿ ಮಾಡಿದ್ದಾರೆ ಅಂತನೂ ಇಲ್ಲ. ಇದನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ ಎಂದರೆ ಏನರ್ಥ? ನಮ್ಮಿಬ್ಬರ ಕರುಳ ಬಳ್ಳಿ ಜಗಳವನ್ನು ಸುದ್ದಿ ಮಾಡುವುದು ಸರಿಯಲ್ಲ ಎಂದರು. ಅತ್ತ ಆ ಮಹಿಳಾ ಅಧಿಕಾರಿ, ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಅಕ್ಕನ ಮಗಳೋ, ಮಾವನ ಮಗನೋ ಎಂಬಂತೆ ಜಗಳ ಆಗಿದೆ. ಅದು ತಮ್ಮದೇ ಮಾತು ಎಂದು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ. ಆದರೆ ಮಹಿಳಾ ಅಧಿಕಾರಿ ಮಾತ್ರ ಅಲ್ಲಗಳೆದಿದ್ದಾರೆ. ಆಡಿಯೋಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನನ್ನು ಇದರಲ್ಲಿ ಎಳೆದು ತರಬೇಡಿ. ನನ್ನನ್ನು ಟಾರ್ಗೆಟ್ ಮಾಡಬೇಡಿ. ಯಾವುದೇ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಆ ತರಹದ ಯಾವುದೇ ಸಮಸ್ಯೆ ನನಗೆ ಆಗಿಲ್ಲ. ನನ್ನದೇ ವಾಯ್ಸ್ ಅಂತ ಹೇಗೆ ಹೇಳುತ್ತೀರಿ? ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಆಡಿಯೋದಲ್ಲಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.