

ಬೆಂಗಳೂರು: ಕಳೆದ ಒಂದು ವಾರದಲ್ಲಿ ಲಸಿಕೆ ಉತ್ಪಾದನೆ ಕಡಿಮೆಯಾಗಿ ಪೂರೈಕೆಯಲ್ಲಿ ವ್ಯತ್ಯಯವಾದದ್ದು ನಿಜ. ಆದರೆ, ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಏಕರೂಪ ವ್ಯವಸ್ಥೆಗೆ ಕ್ರಮವಹಿಸಿದ್ದು, ಕರ್ನಾಟಕಕ್ಕೆ ಜೂನ್ ಅಂತ್ಯದೊಳಗೆ 50 ಲಕ್ಷ ಲಸಿಕೆ ಪೂರೈಸಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಸೇವೆಯೇ ಸಂಘಟನೆಯಡಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಶುಕ್ರವಾರ ಏರ್ಪಡಿಸಿದ್ದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬಡವರಿಗೆ ಒಂದು ಲಕ್ಷ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸದಾನಂದಗೌಡ, ಕರ್ನಾಟಕ ಸರ್ಕಾರ ಖರೀದಿ ಮೂಲಕ 14 ಲಕ್ಷ ಲಸಿಕೆಯನ್ನು ಜೂನ್ನಲ್ಲಿ ಪಡೆಯಲಿದೆ. ಒಟ್ಟಾರೆ 65 ಲಕ್ಷ ಲಸಿಕೆ ಲಭ್ಯವಾಗಲಿದ್ದು, ಯಾರೊಬ್ಬರಲ್ಲೂ ಆತಂಕ ಬೇಡ. ವಿರೋಧ ಪಕ್ಷದ ಕೆಲವು ಮಿತ್ರರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
20 ಕೋಟಿ ಲಸಿಕೆ ಹಂಚಿಕೆ: ಕೇಂದ್ರ ಸರ್ಕಾರ ಜೂನ್ ಅಂತ್ಯದೊಳಗೆ 20 ಕೋಟಿ ಲಸಿಕೆ ಹಂಚಿಕೆ ಗುರಿಯಿಟ್ಟುಕೊಂಡಿದೆ. ಈಗಾಗಲೇ ಹೈದರಾಬಾದ್ ಮೂಲದ ಇಬಯಾಲಜಿಕಲ್ ಸಂಸ್ಥೆಗೆ ಕೋವ್ಯಾಕ್ಸಿನ್, ಕೋವಿಶೀಲ್ಡ್ ಸೇರಿ 30 ಲಸಿಕೆ ಉತ್ಪಾದನೆಗೆ ಅನುಮತಿ ನೀಡಿದೆ. ಮಹಾರಾಷ್ಟ್ರ ಸರ್ಕಾರವೂ ಲಸಿಕೆ ಉತ್ಪಾದನೆಗೆ ಕೈಜೋಡಿಸಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.