

ಚಿತ್ರದುರ್ಗ: ಕರೊನಾ ಹೆಸರು ಕೇಳಿದ್ರೆ ಸಾಕು ಮಾರುದ್ದ ಓಡುವ ಜನರ ನಡುವೆ ಕೆಲ ಸೋಂಕಿತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಪತ್ನಿಗೆ ಕೋವಿಡ್ ಬಂದಿದ್ದಕ್ಕೆ ಹೆದರಿ ಸಾವಿನ ಮನೆಯ ಕದ ತಟ್ಟಿದ್ದಾನೆ.
ಇಂತಹ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಂಗನಾಥಪುರದಲ್ಲಿ ಸಂಭವಿಸಿದೆ. ರಾಜು (32) ಆತ್ಮಹತ್ಯೆ ಮಾಡಿಕೊಂಡವ. ಇವರ ಪತ್ನಿ ರಶ್ಮಿಗೆ ಮೇ 27ರಂದು ಕರೊನಾ ಪಾಸಿಟಿವ್ ಬಂದಿತ್ತು. ರಾಜುವಿನ ಕೋವಿಡ್ ಟೆಸ್ಟ್ ವರದಿ ನೆಗಟಿವ್ ಬಂದಿತ್ತು.
ರಶ್ಮಿಯನ್ನ ದೇವರಕೊಟ್ಟ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪತ್ನಿಗೆ ಕರೊನಾ ಪಾಸಿಟಿವ್ ಬಂದಿದ್ದಕ್ಕೆ ಗಾಬರಿಗೊಂಡಿದ್ದ ರಾಜು, ಅಂದಿನಿಂದ ಖಿನ್ನತೆಗೆ ಒಳಗಾಗಿದ್ದರು. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.