

ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರೊಬ್ಬರು ಮಹಿಳಾ ಅಧಿಕಾರಿಯ ಮೇಲೆ ದರ್ಪ ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನೀನು ಗಂಡಾಗಿದ್ದರೆ ನಿನ್ನ ಕಾಲರ್ ಹಿಡಿಯುತ್ತಿದ್ದೆ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕಾಂಗ್ರೆಸ್ ಶಾಸಕ ಹರ್ಷ್ ವಿಜಯ್ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಕುರಿತಾಗಿ ಮೆಮೋರೆಂಡಮ್ ನೀಡಲು ಉಪ ವಿಭಾಗೀಯ ಮೆಜಿಸ್ಟ್ರೇಟ್ (ಎಸ್ಡಿಎಂ) ಕಚೇರಿಗೆ ಹೋಗಿದ್ದರು. ಈ ವೇಳೆ ಎಸ್ಡಿಎಂ ಕಾಮಿನಿ ಠಾಕೂರ್ ಅವರು ಶಾಸಕರನ್ನು ಭೇಟಿ ಮಾಡುವಲ್ಲಿ ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಶಾಸಕ ಮಹಿಳಾ ಅಧಿಕಾರಿಯೊಂದಿಗೆ ಜಗಳ ಆರಂಭಿಸಿದ್ದಾರೆ. ನಾನು ಶಾಸಕ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ. ನೀನು ಹೆಣ್ಣು. ಹೆಣ್ಣಲ್ಲದೆ ಗಂಡಾಗಿದ್ದಿದ್ದರೆ ನಾನು ನಿನ್ನ ಕಾಲರ್ ಹಿಡಿದು ಮೆಮೋರೆಂಡಮ್ ಕೊಟ್ಟು ಹೋಗುತ್ತಿದ್ದೆ ಎಂದು ಬೆದರಿಸಿದ್ದಾರೆ.
ಶಾಸಕರ ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಧಿಕಾರಿಗಳಿಗೆ ಗೌರವ ನೀಡುವ ಬದಲು ಅವರು ತೋರಿರುವ ದರ್ಪದ ಬಗ್ಗೆ ಜನರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್)