ಸಮಗ್ರ ನೋಟ 2023: ಪಥ ಬದಲಿಸಿದ ಪ್ರಮುಖ ತೀರ್ಪುಗಳು

Samagra Nota Nyayanga 2023
Published on

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗವೂ ಒಂದು ಪ್ರಮುಖ ಅಂಗ. ಶಾಸಕಾಂಗ ಮತ್ತು ಕಾರ್ಯಾಂಗ ಎಡವಿದಾಗ ಎಚ್ಚರಿಸಿ, ಸರಿದಾರಿಗೆ ತರುವ ಕೆಲಸವನ್ನು ನ್ಯಾಯಾಂಗ ಮಾಡುತ್ತಲೇ ಬಂದಿದೆ. ಈ ವರ್ಷವೂ ಹತ್ತುಹಲವು ಮಹತ್ವದ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿದ ನ್ಯಾಯದಾನ ಗಮನ ಸೆಳೆಯಿತು. ಆಯ್ದ ಕೆಲವು ಪ್ರಮುಖ ತೀರ್ಪಗಳ ಮಾಹಿತಿ ಇಲ್ಲಿದೆ.

370ನೇ ವಿಧಿ ನಿಷ್ಕ್ರಿಯಗೊಳಿಸಿದ ಕ್ರಮಕ್ಕೆ ಸಹಮತ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ ಕೇಂದ್ರದ ಕ್ರಮವನ್ನು ಡಿ.11ರಂದು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಪಂಚ ಸದಸ್ಯರ ನ್ಯಾಯಪೀಠ 3 ಸರ್ವಸಮ್ಮತ ತೀರ್ಪಗಳನ್ನು ನೀಡಿತು. ಜಮ್ಮುಕಾಶ್ಮೀರದಿಂದ ಲಡಾಖ್​ನ್ನು ಬೇರ್ಪಡಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದಕ್ಕೂ ಒಪ್ಪಿದ ಸುಪ್ರೀಂಕೋರ್ಟ್, ಹೀಗೆ ಮಾಡುವ ಅಧಿಕಾರ ಸಂಸತ್ತಿಗೆ ಇದೆ ಎನ್ನುವುದನ್ನೂ ದಾಖಲಿಸಿತು.

ನೋಟು ಅಮಾನ್ಯಕ್ಕೆ ಒಪ್ಪಿಗೆ

2016ರಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣದ ನಿರ್ಧಾರ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಸುಪ್ರೀಂಕೋರ್ಟ್ ಕೇಂದ್ರದ ಕ್ರಮವನ್ನು ಒಪ್ಪಿಕೊಂಡು, ರೂ. 500 ಮತ್ತು ರೂ. 1,000 ನೋಟುಗಳ ಅಮಾನ್ಯೀಕರಣವನ್ನು ಜ. 2ರಂದು ಎತ್ತಿಹಿಡಿಯಿತು.

ಚುನಾವಣಾ ಆಯುಕ್ತರ ನೇಮಕಕ್ಕೆ ಸಮಿತಿ

ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭೆ ವಿಪಕ್ಷ ನಾಯಕರನ್ನೊಳಗೊಂಡ ಸಮಿತಿಯು ದೇಶದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ಸುಪ್ರೀಂಕೋರ್ಟ್ ಮಾ. 21ರಂದು ತೀರ್ಪು ನೀಡಿತು. ಆದರೆ, ಆಗಸ್ಟ್​ನಲ್ಲಿ ಕೇಂದ್ರ ಈ ಕುರಿತು ಮಸೂದೆ ಮಂಡಿಸಿ, ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟಿತು. ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ ವಿರೋಧದ ಮಧ್ಯೆ ಇದಕ್ಕೆ ಅನುಮೋದನೆ ಪಡೆದುಕೊಂಡಿತು.

ಜಲ್ಲಿಕಟ್ಟು, ಕಂಬಳಕ್ಕೆ ಅನುಮತಿ

ತಮಿಳುನಾಡಿನ ಜಲ್ಲಿಕಟ್ಟು, ಕರ್ನಾಟಕದ ಕಂಬಳಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿ ಮೇ 18ರಂದು ಮಹತ್ವದ ತೀರ್ಪು ಪ್ರಕಟಿಸಿತು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960ಕ್ಕೆ ರಾಜ್ಯಗಳು ಮಾಡಿದ ತಿದ್ದುಪಡಿಗಳನ್ನು ಸಾಂವಿಧಾನಿಕ ಪೀಠ ಒಪ್ಪಿಕೊಂಡಿತು. ಈ ಹಿಂದೆ ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಕೋಣಗಳನ್ನು ಬಳಸುವುದು ತಪ್ಪು ಎಂದು ಸುಪ್ರೀಂಕೋರ್ಟ್​ನ ದ್ವಿಸದಸ್ಯ ಪೀಠ ಹೇಳಿ, ನಿಷೇಧಿಸಿತ್ತು. 2016ರಲ್ಲಿ ಜಲ್ಲಿಕಟ್ಟನ್ನು ಕೆಲವು ನಿರ್ಬಂಧಗಳೊಂದಿಗೆ ಅನುಮತಿಸುವ ಕೇಂದ್ರ ಸರ್ಕಾರದ ಅಧಿಸೂಚನೆ ಮೂಲಕ ಈ ನಿಷೇಧವನ್ನು ಬದಿಗೆ ಸರಿಸಲಾಗಿತ್ತು. ನಂತರ, ತಮಿಳುನಾಡು, ಕರ್ನಾಟಕ ರಾಜ್ಯಗಳು ಕ್ರೀಡೆಗಳನ್ನು ಅನುಮತಿಸಲು ಕಾಯ್ದೆಗೆ ತಿದ್ದುಪಡಿ ತಂದವು.

ದಿಲ್ಲಿ ಸರ್ಕಾರದ ಅಧಿಕಾರ ಸುಪ್ರೀಂ

ದೆಹಲಿಯಲ್ಲಿ ತನ್ನ ಅಧಿಕಾರ ವ್ಯಾಪ್ತಿ ಮೊಟಕುಗೊಳಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಲೆಫ್ಟಿನಂಟ್ ಗವರ್ನರ್ ವಿರುದ್ಧ ನಿತ್ಯವೂ ಕಾದಾಟ ನಡೆಸುತ್ತಿದ್ದ ಆಮ್ ಆದ್ಮಿ ಪಾರ್ಟಿ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಗೆಲುವಿನ ನಗೆ ಬೀರಿತು. ದೆಹಲಿಯಲ್ಲಿ ಕಾನೂನು-ಸುವ್ಯವಸ್ಥೆ, ಜಮೀನು ಹೊರತುಪಡಿಸಿ ಉಳಿದೆಲ್ಲಾ ಎಲ್ಲಾ ಸೇವೆಗಳ ಮೇಲೆ ಸ್ಥಳೀಯ ಚುನಾಯಿತ ಸರ್ಕಾರ ಅಧಿಕಾರ ಹೊಂದಿರುತ್ತದೆ ಎಂದು ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮೇ 11ರಂದು ತೀರ್ಪು ನೀಡಿ, ರಾಷ್ಟ್ರಪತಿ ನೀಡಿರುವ ಆಡಳಿತಾತ್ಮಕ ಜವಾಬ್ದಾರಿಗಳನ್ನು ಸೀಮಿತ ರೀತಿಯಲ್ಲಿ ಚಲಾಯಿಸಬೇಕು ಎಂದು ಕೇಂದ್ರಕ್ಕೆ ಸೂಚಿಸಿತು.

ರಾಹುಲ್ ಸಂಸದ ಸ್ಥಾನ ಮರುಸ್ಥಾಪನೆ

‘ಎಲ್ಲಾ ಕಳ್ಳರಿಗೆ ಮೋದಿ ಎಂಬ ಸಾಮಾನ್ಯ ಉಪನಾಮವೇ ಹೇಗೆ ಬರುತ್ತದೆ?’ ಎಂದು 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವ್ಯಂಗ್ಯವಾಡಿದ್ದ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ್ ಆಗಸ್ಟ್ 4ರಂದು ರಿಲೀಫ್ ನೀಡಿತು. ಸೂರತ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದ್ದರಿಂದ ರಾಹುಲ್ ಗಾಂಧಿಯವರ ಸಂಸದ ಸ್ಥಾನವೂ ಮರುಸ್ಥಾಪನೆಯಾಯಿತು. ಕೋರ್ಟ್ ತೀರ್ಪಿನ ಬಳಿಕ ಲೋಕಸಭೆ ಸ್ಪೀಕರ್ ಸಂಸದರಾಗಿ ಸಂಸತ್ತಿಗೂ ಪ್ರವೇಶಿಸಲು ಅನುಮತಿ ನೀಡಿದರು.

ಶಾಲಾ ಶಿಕ್ಷಕರ ಆಯ್ಕೆಪಟ್ಟಿಗೆ ಗ್ರೀನ್ ಸಿಗ್ನಲ್

ಸರ್ಕಾರಿ ಪ್ರಾಥಮಿಕ ಶಾಲೆಗಳ 6ರಿಂದ 8ನೇ ತರಗತಿಗಳಿಗೆ ಶಿಕ್ಷಕರ ಕೊರತೆ ಪರಿಗಣಿಸಿ 2023ರ ಮಾ. 8ರಂದು ಹೊರಡಿಸಿದ್ದ ಆಯ್ಕೆ ಪಟ್ಟಿಯಂತೆ 13,352 ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿತು. ಅಭ್ಯರ್ಥಿಯೊಬ್ಬರ ಅರ್ಜಿಯನ್ನು ಆಧರಿಸಿ ಏಕ ಸದಸ್ಯ ಪೀಠ ತಡೆ ನೀಡಿತ್ತು. ಆದರೆ, ಸಿಜೆ ನೇತೃತ್ವದ ವಿಭಾಗೀಯ ಪೀಠವು ಆಯ್ಕೆ ಪಟ್ಟಿಯಂತೆ ನೇಮಕಾತಿ ಅಂತಿಮಗೊಳಿಸಲು ನಿರ್ದೇಶಿಸಿತು. ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅವಕಾಶ ದೊರೆಯಿತು.

545 ಪಿಎಸ್​ಐ ಹುದ್ದೆಗಳ ನೇಮಕ ರದ್ದು

ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣ ಸಂಬಂಧ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತು. ನೇಮಕಾತಿಯಲ್ಲಿ ವಾಮ ಮಾರ್ಗದ ಮೂಲಕ ಹುದ್ದೆ ಪಡೆದವರು ಹೇಗೆ ಕರ್ತವ್ಯ ನಿರ್ವಹಿಸುತ್ತಾರೆಂಬ ಪ್ರಶ್ನೆ ಎತ್ತಿತು. ಸುದೀರ್ಘ ವಿಚಾರಣೆ ಬಳಿಕ ನೇಮಕಾತಿ ಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸುವಂತೆ ಆದೇಶಿಸಿತು.

ಪೋಕ್ಸೊ ಕೇಸ್​ನಲ್ಲಿ ಮುರುಘಾಶ್ರೀಗೆ ರಿಲೀಫ್

ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಕೇಸ್​ನಡಿ ಬಂಧಿತರಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಶರಣರಿಗೆ ಹೈಕೋರ್ಟ್​ನಿಂದ ಜಾಮೀನು ಸಿಕ್ಕಿತು. ಎರಡು ಪ್ರಕರಣಗಳಲ್ಲಿ ರಿಲೀಫ್ ದೊರೆತ ಬಳಿಕವಷ್ಟೇ ಬಂಧಮುಕ್ತ ಮಾಡಲಾಯಿತು.

ಕನ್ನಡದಲ್ಲೇ ತೀರ್ಪು

ಹೈಕೋರ್ಟ್ ತೀರ್ಪಗಳು ಕನ್ನಡದಲ್ಲೂ ಸಿಗಬೇಕೆಂಬ ಕೂಗಿಗೆ ಕ್ರಮೇಣ ಸ್ಪಂದನೆ ವ್ಯಕ್ತವಾಗಿದೆ. ಈ ವರ್ಷ ಆಂಗ್ಲ ಭಾಷೆಯಲ್ಲಿರುವ ತೀರ್ಪಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಕನ್ನಡಕ್ಕೆ ಅನುವಾದಿ ಸುವ ಪ್ರಕ್ರಿಯೆಗೆ ಹೈಕೋರ್ಟ್ ಚಾಲನೆ ನೀಡಿದೆ. ಈ ಸಂಬಂಧವಾಗಿ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಸಿ.ಎಂ. ಜೋಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ನಿಟ್ಟಿನಲ್ಲಿ ತಂತ್ರಾಂಶದಲ್ಲಿ ಕನ್ನಡ ಪದಗಳನ್ನು ಸೇರಿಸುವ ಕೆಲಸ ಪ್ರಗತಿಯಲ್ಲಿದೆ.

ಸರ್ಕಾರಕ್ಕೆ 5 ಲಕ್ಷ ರೂ. ದಂಡ

ಅಕ್ಟೋಬರ್​ನಲ್ಲಿ ಸಾರ್ವಜನಿಕ ಶೌಚಾಲಯ ಸೌಲಭ್ಯ ಒದಗಿಸದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿ ಕಾಲಮಿತಿಯಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಪಬ್ಲಿಕ್ ಟಾಯ್ಲೆಟ್ ಸೌಲಭ್ಯ ಒದಗಿಸುವಂತೆ ನಿರ್ದೇಶನವನ್ನು ನೀಡಿತು.

ಸಲಿಂಗ ಸಂಗಕ್ಕೆ ಮಾನ್ಯತೆ ನಿರಾಕರಣೆ

ಸಲಿಂಗ ಸಂಗಾತಿಗಳಿಗೆ ಮದುವೆ ಮಾಡಿಕೊಂಡು ಜೀವನ ನಡೆಸುವ ಅಥವಾ ವೈವಾಹಿಕ ಸಂಬಂಧಕ್ಕೆ ಸನಿಹವೆನಿಸುವ ಸಹಬಾಳ್ವೆಯ (ಸಿವಿಲ್ ಯೂನಿಯನ್) ಜೀವನಕ್ಕೆ ಕಾನೂನಾತ್ಮಕ ಮಾನ್ಯತೆ ನೀಡಲು ಸುಪ್ರೀಂಕೋರ್ಟ್ ಅ. 17ರಂದು ನಿರಾಕರಿಸಿತು. ಸಲಿಂಗ ಸಂಗಾತಿಗಳ ಪರ ನ್ಯಾಯಾಲಯಗಳು ಕಾನೂನಿನ ಚೌಕಟ್ಟನ್ನು ರೂಪಿಸಲು ಸಾಧ್ಯವಿಲ್ಲ. ಈ ಸಂಬಂಧಗಳಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಇದು ಶಾಸಕಾಂಗಕ್ಕೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತು.

ಮಹಿಳಾ ಅಧಿಕಾರಿಗಳಿಗೆ ಬುದ್ಧಿವಾದ

ಬೀದಿಗೆ ಬಂದಿದ್ದ ರಾಜ್ಯದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಸಂಘರ್ಷಕ್ಕೆ ಡಿ.14ರಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಇಬ್ಬರಿಗೂ ಬುದ್ಧಿವಾದ ಹೇಳಿತು. ಸಿಂಧೂರಿ ವಿರುದ್ಧ ರೂಪಾ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಆರೋಪಗಳನ್ನು ಅಳಿಸಿಹಾಕುವಂತೆ ಸೂಚಿಸಿತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರೂಪಾ ತಮ್ಮ ಕಾಮೆಂಟ್​ಗಳನ್ನು ಅಳಿಸಿ ಹಾಕಿದರು.

ಸಂತ್ರಸ್ತೆ ನೆರವಿಗೆ ನ್ಯಾಯಾಲಯ

ಬೆಳಗಾವಿ ಜಿಲ್ಲೆಯ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್, ಆಕೆಗಾದ ದೌರ್ಜನ್ಯವನ್ನು ಖಂಡಿಸಲು ‘ದುಶ್ಶಾಸನರು’ ಎಂಬ ಪದ ಬಳಸಿತು. ಆಕೆಯನ್ನು ಯಾವುದೇ ಸಂಘಟನೆಗಳವರು ಭೇಟಿ ಮಾಡಬಾರದು. ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಬಾರದು ಎಂದು ನಿರ್ಬಂಧ ವಿಧಿಸಿ ಆಕೆಯ ವೈಯಕ್ತಿಕ ಹಕ್ಕನ್ನು ಎತ್ತಿಹಿಡಿಯಿತು.

ಬಿಎಸ್​ವೈ ವಿರುದ್ಧದ ಎಫ್​ಐಆರ್ ರದ್ದು

ಬೆಂಗಳೂರಿನ ಹಲಗೆವಡೇರಹಳ್ಳಿಯಲ್ಲಿ ಜಮೀನು ಡಿನೋಟಿಫೈ ಮಾಡಿದ ಆರೋಪ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ 8 ವರ್ಷದ ಹಿಂದೆ ದಾಖಲಾಗಿದ್ದ ಎಫ್​ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿತು. ಸಿಎಜಿ ವರದಿ ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಹಾಗೂ ಅದನ್ನು ತನಿಖೆಯ ಭಾಗವಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಬಿಬಿಎಂಪಿ ನಡೆಗೆ ಹೈಕೋರ್ಟ್ ಗರಂ

2023ರಲ್ಲಿ ಹೈಕೋರ್ಟ್​ನಲ್ಲಿ ಬಿಬಿಎಂಪಿ ಸಾಕಷ್ಟು ಬಾರಿ ತರಾಟೆಗೆ ಒಳಗಾಯಿತು. ಸಮರ್ಪಕವಾಗಿ ಕರ್ತವ್ಯ ನಿಭಾಯಿಸದ ಅಧಿಕಾರಿಗಳ ವರ್ತನೆಯನ್ನು ಸಿಜೆ ಹಾಗೂ ಇತರ ಜಡ್ಜ್​ಗಳು ಆಕ್ಷೇಪಿಸಿದರು. ಅನಧಿಕೃತ ಫ್ಲೆಕ್ಸ್ ಹಾಗೂ ಜಾಹೀರಾತು ಫಲಕ ತೆರವು ಮಾಡದ ಪ್ರಕರಣದಲ್ಲಿ ಸರ್ಕಾರ ಹಾಗೂ ಪಾಲಿಕೆಗೆ ತಲಾ 50 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿತು. ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಭಾಗ ತೆರವು, ರಾಜಕಾಲುವೆ ಒತ್ತುವರಿ ತೆರವು ತ್ವರಿತವಾಗಿ ನಡೆಸುವಂತೆ ತಾಕೀತು ಮಾಡಿತು.

ಸ್ಮಶಾನಕ್ಕೆ ಜಾಗ ಮಂಜೂರು

ರಾಜ್ಯದ ಎಲ್ಲ ಗ್ರಾಮಗಳಿಗೆ ಶವಸಂಸ್ಕಾರ ನಡೆಸಲು ಅಗತ್ಯ ಸ್ಮಶಾನ ಭೂಮಿ ಒದಗಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿತು. ಯಾವುದೇ ಮತ, ಧರ್ಮಕ್ಕೆ ತಾರತಮ್ಯ ಮಾಡದಂತೆ ಸ್ಮಶಾನ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಜಮೀನು ಇಲ್ಲದ ಕಡೆಗಳಲ್ಲಿ ಖಾಸಗಿಯವರಿಂದ ಖರೀದಿಸಿ ಸ್ಮಶಾನವಾಗಿ ಅಭಿವೃಧಿ್ಧಡಿಸಬೇಕು ಎಂದು ಆದೇಶ ನೀಡಿತು.

ಪಾಲಿಕೆಗೆ ಪಾಠ ಮಾಡಿ...

ಕಟ್ಟಡ ನಿರ್ವಣಕ್ಕೆ ಸಂಬಂಧಿಸಿ ಒತ್ತುವರಿ ಕುರಿತು ದೂರು ಬಂದಲ್ಲಿ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ. ಏಕೆಂದರೆ ಪಾಲಿಕೆ ನ್ಯಾಯಾಂಗ ಪ್ರಾಧಿಕಾರ ಅಲ್ಲ. ಆದರೂ, ಸ್ವತ್ತಿಗೆ ಸಂಬಂಧಿಸಿದಂತೆ ನಕ್ಷೆ ಮಂಜೂರಾತಿ ಅಥವಾ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಪರಿಶೀಲನೆ ಮಾಡಬಹುದಾಗಿದೆ ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರ ಪೀಠವು ಆದೇಶ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net