ನೋವು-ನಲಿವುಗಳ ಮಿಶ್ರಣದೊಂದಿಗೆ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆಯುವ ವರ್ಷವಿದು. ಏಷ್ಯಾಡ್ನಲ್ಲಿ ಭಾರತ ಪದಕಗಳ ಶತಕ ಸಿಡಿಸಿ ಹೊಸ ಇತಿಹಾಸ ರಚಿಸಿದರೆ, ಏಷ್ಯನ್ ಪ್ಯಾರಾ ಗೇಮ್ಸ್ನಲ್ಲೂ ಇದು ಪುನರಾವರ್ತನೆಯಾಯಿತು. ಒಲಿಂಪಿಕ್ಸ್ ಸ್ವರ್ಣ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ವಿಶ್ವ ಚಾಂಪಿಯನ್ ಪಟ್ಟವೂ ಒಲಿಯಿತು. ಆದರೆ ಕ್ರಿಕೆಟ್ನಲ್ಲಿ 2 ಪ್ರಮುಖ ವಿಶ್ವ ಕಿರೀಟ ಗೆಲ್ಲುವ ಸನಿಹದಲ್ಲಿ ಭಾರತ ಎಡವಿತು. ಚೆಸ್ ವಿಶ್ವಕಪ್ನಲ್ಲಿ ಆರ್. ಪ್ರಜ್ಞಾನಂದ ಕೂಡ ಫೈನಲ್ನಲ್ಲಿ ಮುಗ್ಗರಿಸಿದರು. ಈ ಫೈನಲ್ ಸೋಲುಗಳ ನೋವಿನ ನಡುವೆ ಭಾರತಕ್ಕೆ ಪದಕ ಗೆಲುವುಗಳ ಸಂಭ್ರಮ ಮುದ ನೀಡಿದವು.

ಮುಂದುವರಿದ ಐಸಿಸಿ ಟ್ರೋಫಿ ಬರ: ಕಳೆದೊಂದು ದಶಕದ ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಗೆಲುವಿನ ಬರ ಈ ವರ್ಷವೂ ಮುಂದುರಿಯಿತು. ಐಸಿಸಿ ಟ್ರೋಫಿ ಗೆಲ್ಲುವ ಎರಡೆರಡು ಅವಕಾಶಗಳನ್ನು ಭಾರತ ಕೈಚೆಲ್ಲಿತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಸತತ 2 ಬಾರಿ ಮುಗ್ಗರಿಸಿದ ಭಾರತ, ಬಳಿಕ ತವರಿನ ಏಕದಿನ ವಿಶ್ವಕಪ್ನಲ್ಲಿ ಸತತ 10 ಜಯದೊಂದಿಗೆ ಫೈನಲ್ಗೇರಿದರೂ ಪ್ರಶಸ್ತಿ ಗೆಲ್ಲಲಿಲ್ಲ. ಎರಡೂ ಸಲ ಪ್ಯಾಟ್ ಕಮ್ಮಿನ್ಸ್ ಸಾರಥ್ಯದ ಆಸೀಸ್ ತಂಡವೇ ಭಾರತಕ್ಕೆ ಕಗ್ಗಂಟಾಯಿತು. ಈ ನಡುವೆ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ಪ್ರಾಬಲ್ಯ ಮುಂದುವರಿಯಿತು. ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಆಸೀಸ್ ವಿರುದ್ಧ ತವರಿನಲ್ಲಿ 2-1ರಿಂದ ಸರಣಿ ಗೆದ್ದ ಭಾರತ, ವಿಂಡೀಸ್ನಲ್ಲೂ ಸತತ 5ನೇ ಟೆಸ್ಟ್ ಸರಣಿ ಜಯಿಸಿತು. ಏಕದಿನದಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಭಾರತ, ಏಷ್ಯಾಕಪ್ನಲ್ಲೂ 8ನೇ ಬಾರಿ ಚಾಂಪಿಯನ್ ಪಟ್ಟವೇರಿತು. ಇನ್ನು ಟಿ20ಯಲ್ಲೂ ಲಂಕಾ, ಕಿವೀಸ್, ಐರ್ಲೆಂಡ್, ಆಸೀಸ್ ಎದುರು ವಿಕ್ರಮ ಮೆರೆದ ಭಾರತ, ಏಷ್ಯನ್ ಗೇಮ್ಸ್ನಲ್ಲೂ ಚಿನ್ನದ ಪದಕ ಗೆದ್ದು ಬೀಗಿತು.
ಗಿಲ್ ರನ್ಪ್ರವಾಹ, ದ್ವಿಶತಕ: ಟೀಮ್ ಇಂಡಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದ ಯುವ ಆರಂಭಿಕ ಶುಭಮಾನ್ ಗಿಲ್ ವರ್ಷದಲ್ಲಿ ಆಡಿದ 29 ಏಕದಿನ ಪಂದ್ಯಗಳಲ್ಲಿ 1,584 ರನ್ ಸಿಡಿಸಿ ವಿಜೃಂಭಿಸಿದರು. ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕವನ್ನೂ ಸಿಡಿಸಿದರು. ಟೆಸ್ಟ್, ಟಿ20ಯಲ್ಲೂ ತಲಾ ಒಂದು ಶತಕ ಸಹಿತ ಈ ವರ್ಷ ಒಟ್ಟು 7 ಶತಕ ಸಿಡಿಸಿದರು.
ಮಹಿಳೆಯರಿಗೆ ವಿಶ್ವಕಪ್: ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳೆಯರ ಚೊಚ್ಚಲ ಆವೃತ್ತಿಯ 19 ವಯೋಮಿತಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಶೆಫಾಲಿ ವರ್ಮ ಸಾರಥ್ಯದಲ್ಲಿ ಪ್ರಶಸ್ತಿ ಒಲಿಸಿಕೊಂಡಿತು. ಭಾರತ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳಿಂದ ಜಯಿಸಿತು.
ಕೊಹ್ಲಿ ಶತಕಗಳ ದಾಖಲೆ: ಶತಕಗಳ ಸರದಾರನಾಗಿ ಮತ್ತೆ ಲಯಕ್ಕೆ ಮರಳಿದ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್ ಅವರ 49 ಶತಕಗಳ ವಿಶ್ವದಾಖಲೆ ಮುರಿದು ಶತಕಗಳ ಅರ್ಧಶತಕ ಪೂರೈಸಿದರು. ತವರಿನ ಏಕದಿನ ವಿಶ್ವಕಪ್ನಲ್ಲೇ ಅವರು, ಸಚಿನ್ ಕಣ್ಣೆದುರಲ್ಲೇ ಈ ಸಾಧನೆ ಮಾಡಿದ್ದು ವಿಶೇಷ. ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲೂ ಮೂರೂವರೆ ವರ್ಷಗಳ ಶತಕಗಳ ಬರ ನೀಗಿಸಿಕೊಂಡರು. 2023ರಲ್ಲಿ ಒಟ್ಟು 8 ಶತಕ ದಾಖಲಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಗಳ ಸಂಖ್ಯೆಯನ್ನು 80ಕ್ಕೇರಿಸಿಕೊಂಡರು.
ನೀರಜ್ ಚೋಪ್ರಾ ವಿಶ್ವ ಚಾಂಪಿಯನ್: ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಈ ವರ್ಷವೂ ಐತಿಹಾಸಿಕ ನಿರ್ವಹಣೆ ತೋರಿದರು. 2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ರಜತ ಪದಕ ಒಲಿಸಿಕೊಂಡಿದ್ದ ನೀರಜ್, ಈ ಬಾರಿ 88.17 ಮೀ. ಎಸೆತದ ಸಾಧನೆಯೊಂದಿಗೆ ಅದನ್ನು ಸ್ವರ್ಣ ಪದಕವನ್ನಾಗಿಸಿಕೊಂಡು ವಿಶ್ವ ಚಾಂಪಿಯನ್ ಪಟ್ಟವೇರಿದರು. ಇದರೊಂದಿಗೆ 25ನೇ ವಯಸ್ಸಿನಲ್ಲಿ ವೃತ್ತಿಜೀವನದ ಪ್ರಮುಖ ಎಲ್ಲ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು. ಒಡಿಶಾದ ಕಿಶೋರ್ ಜೇನಾ ಮತ್ತು ಕನ್ನಡಿಗ ಮನು ಡಿ.ಪಿ. ಕ್ರಮವಾಗಿ 5, 6ನೇ ಸ್ಥಾನ ಪಡೆಯುವುದರೊಂದಿಗೆ ಅಗ್ರ 6ರೊಳಗೆ ಮೂವರು ಭಾರತೀಯರು ಸ್ಥಾನ ಪಡೆದ ಐತಿಹಾಸಿಕ ಸಾಧನೆಯೂ ನಿರ್ವಣವಾಯಿತು.
ಏಷ್ಯಾಡ್ನಲ್ಲಿ ಪದಕಗಳ ಶತಕ: ಚೀನಾದ ಹಾಂಗ್ರೆkೌನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮೊಟ್ಟಮೊದಲ ಬಾರಿಗೆ 100ಕ್ಕೂ ಅಧಿಕ ಪದಕ ಗೆದ್ದಿತು. 28 ಚಿನ್ನ, 38 ಬೆಳ್ಳಿ, 41 ಕಂಚಿನ ಸಹಿತ 107 ಪದಕ ಗೆದ್ದು ಪದಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿತು. ವಿಶೇಷವಾಗಿ ಶೂಟಿಂಗ್, ಅಥ್ಲೆಟಿಕ್ಸ್ನಲ್ಲಿ ಭಾರತ ಭರ್ಜರಿ ಪದಕ ಬೇಟೆಯಾಡಿತು. ಆರ್ಚರಿ, ಬ್ಯಾಡ್ಮಿಂಟನ್, ಸ್ಕಾ್ವಷ್, ಕಬಡ್ಡಿ, ಟೇಬಲ್ ಟೆನಿಸ್ನಲ್ಲೂ ಗಮನಾರ್ಹ ನಿರ್ವಹಣೆ ತೋರಿತು. ನಂತರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲೂ 29 ಚಿನ್ನ, 31 ಬೆಳ್ಳಿ, 51 ಕಂಚಿನ ಸಹಿತ 111 ಪದಕಗಳನ್ನು ಗೆದ್ದು ಹೊಸ ಇತಿಹಾಸ ಬರೆಯಿತು.
ಮಹಿಳೆಯರ ಐಪಿಎಲ್ ಶುರು: ಮಹಿಳಾ ಕ್ರಿಕೆಟಿಗರ ದೀರ್ಘಕಾಲದ ಕನಸಾಗಿದ್ದ ಮಹಿಳಾ ಐಪಿಎಲ್ ಟೂರ್ನಿಗೆ ಬಿಸಿಸಿಐ, ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹೆಸರಿನಲ್ಲಿ ಚಾಲನೆ ನೀಡಿತು. 5 ತಂಡಗಳ ಟೂರ್ನಿಯ ಪ್ರಸಾರ ಹಕ್ಕು 951 ಕೋಟಿ ರೂ.ಗೆ ಮಾರಾಟವಾದರೆ, ಆಟಗಾರ್ತಿಯರ ಹರಾಜಿನಲ್ಲಿ ಸ್ಮೃತಿ ಮಂದನಾ ಸರ್ವಾಧಿಕ 3.4 ಕೋಟಿ ರೂ.ಗೆ ಆರ್ಸಿಬಿ ಸೇರಿದರು. ಹರ್ವನ್ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಿರಾಸೆ ತಂದ ಪಿವಿ ಸಿಂಧು: ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸಲು ವಿಫಲರಾದ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು 2023ರಲ್ಲಿ ಪ್ರಶಸ್ತಿ ಬರ ಎದುರಿಸಿದರು. ಬಿಡಬ್ಲ್ಯುಎಫ್ ರ್ಯಾಂಕಿಂಗ್ನ ಅಗ್ರ 10 ರಿಂದಲೂ ಹೊರಬಿದ್ದರು. ಪುರುಷರ ಸಿಂಗಲ್ಸ್ ಆಟಗಾರ ಎಚ್ಎಸ್ ಪ್ರಣಯ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಜತೆಗೆ ಏಷ್ಯಾಡ್ನಲ್ಲಿ ಕಳೆದ 41 ವರ್ಷಗಳಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಷಟ್ಲರ್ ಎನಿಸಿದರು.
ಚಿರಾಗ್-ಸಾತ್ವಿಕ್ ಶೈನಿಂಗ್: ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ಜೋಡಿ ವರ್ಷದುದ್ದಕ್ಕೂ ಗಮನಸೆಳೆಯಿತು. ಏಷ್ಯಾಡ್ನಲ್ಲಿ ಚಿನ್ನದ ಪದಕ ಗೆದ್ದ ಜೋಡಿ ವಿಶ್ವ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎನಿಸಿತು. ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿಯ ಗೌರವವೂ ಒಲಿಯಿತು.
ಪ್ರಜ್ಞಾನಂದ ರನ್ನರ್ಅಪ್: ತಮಿಳುನಾಡಿನ 18 ವರ್ಷದ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ, ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್ ಫೈನಲ್ಗೇರಿದ 2ನೇ ಭಾರತೀಯರೆನಿಸಿದರು. ಆದರೆ ಫೈನಲ್ನಲ್ಲಿ ನಾರ್ವೆ ತಾರೆ ಮ್ಯಾಗ್ನಸ್ ಕಾರ್ಲ್ಸೆನ್ ಎದುರು ಸೋತ ನಡುವೆಯೂ 2024ರ ಕ್ಯಾಂಡಿಡೇಟ್ ಟೂರ್ನಿಗೆ ಅರ್ಹತೆ ಸಂಪಾದಿಸಿದರು.
ಆಸೀಸ್ಗೆ ಅವಳಿ ವಿಶ್ವ ಚಾಂಪಿಯನ್ ಪಟ್ಟ: ಗತವೈಭವವನ್ನು ನೆನಪಿಸುವಂತೆ ಆಸ್ಟ್ರೇಲಿಯಾ ಒಂದೇ ವರ್ಷ ಎರಡೆರಡು ಐಸಿಸಿ ಟ್ರೋಫಿ ಗೆದ್ದು ಜಾಗತಿಕ ಕ್ರಿಕೆಟ್ನಲ್ಲಿ ಮತ್ತೆ ಪ್ರಾಬಲ್ಯ ಮೆರೆಯಿತು. ಭಾರತವನ್ನು ಮಣಿಸಿ ಮೊದಲ ಬಾರಿ ಐಸಿಸಿ ಟೆಸ್ಟ್ ವಿಶ್ವ ಕಿರೀಟ ಗೆದ್ದ ಆಸೀಸ್, ಬಳಿಕ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಆತಿಥೇಯರ ಎದುರು ಸೋಲಿನ ಆರಂಭ ಕಂಡರೂ ನಂತರ ಸತತ 9 ಜಯದೊಂದಿಗೆ ಕೊನೆಗೆ ಫೈನಲ್ನಲ್ಲಿ ಆತಿಥೇಯರನ್ನೇ ಮಣಿಸಿ 6ನೇ ಬಾರಿ ವಿಶ್ವಕಪ್ ಜಯಿಸಿತು. ಈ ನಡುವೆ ಪ್ರತಿಷ್ಠಿತ ಆಶಸ್ ಟ್ರೋಫಿಯನ್ನೂ ಉಳಿಸಿಕೊಂಡಿತು.
ಸಿಎಸ್ಕೆಗೆ 5ನೇ ಕಿರೀಟ: ಚೆನ್ನೈ ಸೂಪರ್ಕಿಂಗ್ಸ್ ತಂಡ ದಾಖಲೆಯ 5ನೇ ಬಾರಿಗೆ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿತು. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ನಲ್ಲಿ ರವೀಂದ್ರ ಜಡೇಜಾ ಕೊನೇ 2 ಎಸೆತಗಳಲ್ಲಿ ಸಿಕ್ಸರ್-ಬೌಂಡರಿ ಬಾರಿಸಿ ಸಿಎಸ್ಕೆ ಗೆಲ್ಲಿಸಿದರು. ಶುಭಮಾನ್ ಗಿಲ್ ಸರ್ವಾಧಿಕ 890 ರನ್ ಸಿಡಿಸಿದರೆ, ಮೊ. ಶಮಿ ಗರಿಷ್ಠ 28 ವಿಕೆಟ್ ಕಬಳಿಸಿದರು. ಗುಜರಾತ್ ವಿರುದ್ಧ ಪಂದ್ಯದ ಕೊನೇ 5 ಎಸೆತಗಳಲ್ಲಿ ಸತತ ಸಿಕ್ಸರ್ ಸಿಡಿಸಿ ಕೆಕೆಆರ್ ಗೆಲ್ಲಿಸುವ ಮೂಲಕ ರಿಂಕು ಸಿಂಗ್ ಟೂರ್ನಿಯ ವಿಶೇಷ ಸ್ಟಾರ್ ಆಗಿ ಮಿಂಚಿದರು.
ಹಾಕಿಯಲ್ಲಿ ಯಶಸ್ಸಿನ ಓಟ: ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ತವರಿನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಎನಿಸಿದವು. ಹಾಂಗ್ರೆkೌ ಏಷ್ಯಾಡ್ನಲ್ಲಿ ಪುರುಷರ ತಂಡ ಚಿನ್ನದ ಪದಕ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದರೆ, ಸವಿತಾ ಸಾರಥ್ಯದ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಕುಸ್ತಿಪಟುಗಳಿಂದ ಪ್ರತಿಭಟನೆ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೇಶದ ಪ್ರಮುಖ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಬೀದಿಗಿಳಿದು ನವದೆಹಲಿಯ ಜಂತರ್ ಮಂತರ್ನಲ್ಲಿ ಹಲವು ದಿನಗಳ ಕಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ನಡುವೆ ಕುಸ್ತಿಪಟುಗಳು ಮತ್ತು ದೆಹಲಿ ಪೊಲೀಸರ ನಡುವಿನ ಸಂಘರ್ಷವೂ ಭಾರಿ ಸುದ್ದಿಯಾಯಿತು. ಕುಸ್ತಿ ಸಂಸ್ಥೆ ಬ್ರಿಜ್ ಹಿಡಿತದಿಂದ ಹೊರಬಂದರೂ, ವರ್ಷಾಂತ್ಯದಲ್ಲಿ ನಡೆದ ಚುನಾವಣೆ ಮೂಲಕ ಮತ್ತೆ ಆಪ್ತನನ್ನು ಗೆಲ್ಲಿಸಿ ಪರೋಕ್ಷವಾಗಿ ಅಧಿಕಾರ ಹಿಡಿದರು. ಇದರಿಂದ ಕ್ರೀಡಾ ಸಚಿವಾಲಯ ಮತ್ತೆ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿತು.
ಟೆನಿಸ್ ಗ್ರಾಂಡ್ ಸ್ಲಾಂ ಚಾಂಪಿಯನ್ಸ್
- ಆಸ್ಟ್ರೇಲಿಯನ್ ಓಪನ್: ನೊವಾಕ್ ಜೋಕೊವಿಕ್, ಅರಿನಾ ಸಬಲೆಂಕಾ.
- ವಿಂಬಲ್ಡನ್: ನೊವಾಕ್ ಜೋಕೊವಿಕ್, ಇಗಾ ಸ್ವಿಯಾಟೆಕ್.
- ಫ್ರೆಂಚ್ ಓಪನ್: ಕಾಲೋಸ್ ಅಲ್ಕರಾಜ್, ಮಾರ್ಕೆಟ ವೆಂಡ್ರೋಸೋವಾ.
- ಯುಎಸ್ ಓಪನ್: ನೊವಾಕ್ ಜೋಕೊವಿಕ್, ಕೋಕೋ ಗೌಫ್.
- ಮರೆಯಾದವರು: ಬಿಷನ್ ಸಿಂಗ್ ಬೇಡಿ, ಹೀತ್ ಸ್ಟ್ರೀಕ್
- ಕ್ರೀಡಾ ತಾರೆಯರ ವಿದಾಯ: ಸಾನಿಯಾ ಮಿರ್ಜಾ, ಸ್ಟುವರ್ಟ್ ಬ್ರಾಡ್, ಅಂಬಾಟಿ ರಾಯುಡು, ಶಾನ್ ಮಾರ್ಷ್, ಮೆಗ್ ಲ್ಯಾನಿಂಗ್
- ವರ್ಷದ ವಿವಾಹ: ಕೆ.ಎಲ್. ರಾಹುಲ್-ಆಥಿಯಾ ಶೆಟ್ಟಿ