More

    ಸಮಗ್ರ ನೋಟ 2023; ನೆನಪುಗಳನ್ನುಳಿಸಿ ಹೋದವರು

    ಕಾಲಚಕ್ರದ ಓಟದಲ್ಲಿ ಮತ್ತೊಂದು ವರ್ಷ ಹಿಂದೆ ಹೋಗುತ್ತಿದೆ. ಆದರೆ, 2023ರಲ್ಲಿ ಅನೇಕ ಖ್ಯಾತನಾಮರನ್ನು, ಸಾಧಕರನ್ನು ಈ ದೇಶ, ನಾಡು ಕಳೆದುಕೊಂಡಿತು. ಇಂಥ ನಷ್ಟ ಒಂದು ಬಗೆಯ ಶೂನ್ಯವನ್ನೇ ಸೃಷ್ಟಿಸಿಬಿಡುತ್ತದೆ. ಹೀಗೆ ಅಗಲಿದವರು ಭೌತಿಕವಾಗಿ ನಮ್ಮೊಡನೆ ಇಲ್ಲದೆ ಹೋದರೂ, ಅವರ ಕಾರ್ಯಗಳು, ಸಾಧನೆ ಮತ್ತು ಸಂದೇಶದ ಮೂಲಕ ಸದಾ ಜನರ ನೆನಪಿನಲ್ಲಿ, ಮನಸ್ಸಿನಲ್ಲಿ ಉಳಿಯುತ್ತಾರೆ. ಇವರೆಲ್ಲ ಹರಿಸಿದ ಪ್ರೇರಣೆಯ ಮಿಂಚು ಭವಿಷ್ಯಕ್ಕೂ ಬೆಳಕು.

    ಸಿದ್ಧೇಶ್ವರ ಸ್ವಾಮೀಜಿ: ಸರಳತೆ, ಸಜ್ಜನಿಕೆಗೆ ಹೆಸರಾಗಿದ್ದ ಸಂತ, ವಾಗ್ಮಿ, ಖ್ಯಾತ ಪ್ರವಚನಕಾರ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ವರ್ಷಾರಂಭದಲ್ಲೇ (ಜನವರಿ 2) ಶಿವೈಕ್ಯರಾದರು. ರಾಜ್ಯದ ಮೂಲೆಮೂಲೆಯಿಂದ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಅಪಾರ ಸಂಖ್ಯೆಯ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು.

    ಎಂ.ಎಸ್. ಸ್ವಾಮಿನಾಥನ್: ಭಾರತದ ಹಸಿರುಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ, ರಾಜ್ಯಸಭೆ ಮಾಜಿ ಸದಸ್ಯ ಎಂ.ಎಸ್. ಸ್ವಾಮಿನಾಥನ್ (98) ಸೆಪ್ಟೆಂಬರ್ 28ರಂದು ಚೆನ್ನೈನಲ್ಲಿ ವಿಧಿವಶರಾದರು. ಅವರು 6 ದಶಕಗಳ ಹಿಂದೆ ಹಸಿರುಕ್ರಾಂತಿ ಪರಿಕಲ್ಪನೆಯ ಮೂಲಕ ದೇಶವನ್ನು ಆಹಾರಕ್ಷಾಮದಿಂದ ಹೊರತಂದವರು. ಮ್ಯಾಗ್ಸೆಸೆ, ಪದ್ಮವಿಭೂಷಣ ಪ್ರಶಸ್ತಿ ಮಾತ್ರವಲ್ಲದೆ, 84 ಗೌರವ ಡಾಕ್ಟರೇಟ್​ಗಳಿಗೆ ಅವರು ಪಾತ್ರರಾಗಿದ್ದು ವಿಶೇಷ.

    ಬಿ.ಕೆ.ಎಸ್.ವರ್ವ: ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್.ವರ್ವ (74) ಫೆಬ್ರವರಿ 6ರಂದು ಹೃದಯಾಘಾತದಿಂದ ಅಸುನೀಗಿದರು. ರವಿವರ್ಮನ ಕಲಾಕೃತಿಗಳಿಂದ ಪ್ರಭಾವಿತರಾಗಿದ್ದ ಅವರು, 1986ರಿಂದ ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಅವರ ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ಬಹು ಜನಪ್ರಿಯ.

    ಸಾರಾ ಅಬೂಬಕ್ಕರ್: ಖ್ಯಾತ ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ (87) ವಯೋಸಹಜ ಆರೋಗ್ಯ ಸಮಸ್ಯೆಯಿಂದ ಜನವರಿ 10ರಂದು ಕೊನೆಯುಸಿರೆಳೆದರು. ‘ಚಂದ್ರಗಿರಿ ತೀರದಲ್ಲಿ’ ಅವರ ಪ್ರಸಿದ್ಧ ಕಾದಂಬರಿಗಳಲ್ಲೊಂದು. ಮೂಲತಃ ಕಾಸರಗೋಡಿನವರಾದ ಅವರು, ವಿವಾಹ ನಂತರ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು.

    ಫಾತಿಮಾ ಬೀವಿ: ಸುಪ್ರೀಂ ಕೋರ್ಟ್​ನ ಪ್ರಥಮ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ (96) ನವೆಂಬರ್ 23ರಂದು ಕೇರಳದ ಕೊಲ್ಲಂನಲ್ಲಿ ನಿಧನರಾದರು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆ ಇವರದು. ತಮಿಳುನಾಡು ರಾಜ್ಯಪಾಲೆ ಆಗಿದ್ದರು.

    ಡಿ.ಬಿ. ಚಂದ್ರೇಗೌಡ: ಮಾಜಿ ಸಚಿವ, ಮಾಜಿ ವಿಧಾನಸಭಾಧ್ಯಕ್ಷ ಡಿ.ಬಿ. ಚಂದ್ರೇಗೌಡ (87) ನವೆಂಬರ್ 7ರಂದು ನಿಧನ ರಾದರು. ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆ- ಹೀಗೆ ನಾಲ್ಕೂ ಸದನಗಳಲ್ಲಿ ಸದಸ್ಯರಾಗಿದ್ದ ಹಿರಿಮೆ ಅವರದ್ದು.

    ಸಿ.ವಿ.ಶಿವಶಂಕರ್: ಕನ್ನಡ ಚಿತ್ರರಂಗಕ್ಕೆ 1962ರಲ್ಲಿ ಪ್ರವೇಶಿಸಿ, ಚಿತ್ರಕಥೆ-ಗೀತೆ ರಚನೆಕಾರ, ನಟ, ಸಹಾಯಕ ನಿರ್ದೇಶಕ, ನಿರ್ವಪಕ, ನಿರ್ದೇಶಕರಾಗಿ ದುಡಿದ ಸಿ.ವಿ. ಶಿವಶಂಕರ್ (90) ಜೂನ್ 27ರಂದು ಪ್ರಾಣ ತ್ಯಜಿಸಿದರು.

    ಸಿ.ಆರ್.ರಾವ್: ಗಣಿತಜ್ಞ ಹಾಗೂ ಸಂಖ್ಯಾಶಾಸ್ತ್ರಜ್ಞ ಕಲ್ಕಂಪುಡಿ ರಾಧಾಕೃಷ್ಣ ರಾವ್ (102) ಆಗಸ್ಟ್ 23ರಂದು ಕೊನೆಯುಸಿರೆಳೆದರು. ಗಣಿತ-ಸಂಖ್ಯಾಶಾಸ್ತ್ರ ದಲ್ಲಿನ ಇವರ ಸಾಧನೆಗಾಗಿ ಸರ್ಕಾರ ಇವರನ್ನು ಪದ್ಮಭೂಷಣ ಮತ್ತು ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಿದೆ. ಮೂಲತಃ ಬಳ್ಳಾರಿಯವರಾಗಿದ್ದ ಇವರು ಒಟ್ಟು 477 ಪ್ರಬಂಧಗಳನ್ನು ಮಂಡಿಸಿದ್ದರು.

    ಶರತ್​ಬಾಬು: ಮೂಲತಃ ತೆಲುಗು ಚಿತ್ರರಂಗದವರಾದ ಇವರು ಕನ್ನಡಿಗರಿಗೆ ‘ಅಮೃತವರ್ಷಿಣಿ’ ಸಿನಿಮಾ ಮೂಲಕ ಚಿರಪರಿಚಿತ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಕಿರುತೆರೆಯಲ್ಲೂ ಮನೆಮಾತಾಗಿದ್ದ ಶರತ್​ಬಾಬು (72) ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಮೇ 22ರಂದು ನಿಧನರಾದರು.

    ಲೀಲಾವತಿ: ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ನಟಿ ಲೀಲಾವತಿ (85) ಡಿಸೆಂಬರ್ 8ರಂದು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಸೇರಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಪುತ್ರ ವಿನೋದ್ ರಾಜ್​ರ ಚಿತ್ರ ನಿರ್ವಿುಸುವ ಮೂಲಕ ನಿರ್ವಪಕಿಯೂ ಆಗಿದ್ದರು. ಡಾ. ರಾಜ್​ಕುಮಾರ್ ಪ್ರಶಸ್ತಿ, ಫಿಲ್ಮ್​ಫೇರ್ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.

    ಸ್ಪಂದನಾ ವಿಜಯ್: ‘ಅಪೂರ್ವ’ ಹಾಗೂ ‘ಕಿಸ್ಮತ್’ ಚಿತ್ರಗಳಲ್ಲಿ ನಟಿಸಿದ್ದ ಸ್ಪಂದನಾ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ, ನಟ ವಿಜಯ ರಾಘವೇಂದ್ರ ಅವರ ಪತ್ನಿ. ಮದುವೆ ಬಳಿಕ ನಟನೆಯಿಂದ ದೂರವಿದ್ದರು. ಕುಟುಂಬಸ್ಥರ ಜತೆ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ಆಗಸ್ಟ್ 7ರಂದು ಹೃದಯಾಘಾತದಿಂದ ವಿಧಿವಶರಾದರು.

    ಶರದ್ ಯಾದವ್: ಲೋಕಸಭೆಗೆ 7 ಸಲ, ರಾಜ್ಯಸಭೆಗೆ 4 ಸಲ ಆಯ್ಕೆ ಆಗಿದ್ದ ಕೇಂದ್ರದ ಮಾಜಿ ಸಚಿವ ಶರದ್ ಯಾದವ್ (76) ಜನವರಿ 12ರಂದು ಇಹಲೋಕ ತ್ಯಜಿಸಿದರು. ಜನತಾದಳ (ಸಂಯುಕ್ತ) ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಈ ಸಮಾಜವಾದಿ ಚಿಂತನೆಯ ನಾಯಕ, ಬಳಿಕ ತಮ್ಮದೇ ಆದ ರಾಷ್ಟ್ರೀಯ ಜನತಾದಳ ಹುಟ್ಟುಹಾಕಿದ್ದರು.

    ಎಸ್.ಪಿ.ಹಿಂದುಜಾ: ಹಿಂದುಜಾ ಸಮೂಹ ಸಂಸ್ಥೆಗಳ ಚೇರ್ಮನ್ ಆಗಿದ್ದ ಶ್ರೀಚಂದ್ ಪರಮಾನಂದ್ ಹಿಂದುಜಾ (87) ಮೇ 17ರಂದು ಲಂಡನ್​ನಲ್ಲಿ ನಿಧನರಾದರು. ಶ್ರೀಚಂದ್, ಭಾರತ ಮಾತ್ರವಲ್ಲದೆ ಸ್ವಿಜರ್ಲೆಂಡ್​ನಲ್ಲೂ ಬ್ಯಾಂಕ್​ಗಳನ್ನು ಸ್ಥಾಪಿಸಿದರು.

    ಸುಬ್ರತಾ ರಾಯ್: ಸಹಾರಾ ಇಂಡಿಯಾ ಸಮೂಹ ಸಂಸ್ಥೆ ಮಾಲೀಕ ಸುಬ್ರತಾ ರಾಯ್ (75) ನವೆಂಬರ್ 14ರಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾದರು. ಭಾರತೀಯ ರೈಲ್ವೆ ನಂತರ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಕೆಲಸ ನೀಡಿದ್ದ ಉದ್ಯೋಗದಾತ. ಸಹರಾ ಗ್ರೂಪ್ ಅಧೀನ ದೇಶದಲ್ಲಿ 5 ಸಾವಿರಕ್ಕೂ ಅಧಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 12 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ. ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಜೈಲಿಗೆ ಹೋಗಿಬಂದಿದ್ದರು.

    ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ: ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕವನ್ನು ನಾಲ್ಕು ಬಾರಿ ಯಶಸ್ವಿಯಾಗಿ ನಿರ್ವಹಿಸಿ, 50ಕ್ಕೂ ಹೆಚ್ಚು ವರ್ಷಗಳ ಕಾಲ ಜೈನ ಮಠದ ಪೀಠಾಧಿಪತಿಯಾಗಿ ಶ್ರವಣಬೆಳಗೊಳವನ್ನು ವಿಶ್ವವಿಖ್ಯಾತಿಗೊಳಿಸಲು ಶ್ರಮಿಸಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಮಾರ್ಚ್ 23ರಂದು ಜಿನೈಕ್ಯರಾದರು.

    ಕೆ.ವಿ. ತಿರುಮಲೇಶ್: ಕನ್ನಡದ ಪ್ರಸಿದ್ಧ ಕವಿ, ವಿಮರ್ಶಕ, ಭಾಷಾಶಾಸ್ತ್ರಜ್ಞ ಕೆ.ವಿ. ತಿರುಮಲೇಶ್ (82) ಜನವರಿ 30ರಂದು ಹೈದರಾಬಾದ್​ನಲ್ಲಿ ನಿಧನರಾದರು. ಕಾದಂಬರಿ, ಕವನ ಸಂಕಲನ, ವಿಮರ್ಶಾ ಕೃತಿ ಸೇರಿ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

    ನಂದಮೂರಿ ತಾರಕರತ್ನ: ಟಾಲಿವುಡ್​ನ ಖ್ಯಾತ ಚಿತ್ರನಟ ನಂದಮೂರಿ ತಾರಕರತ್ನ (39) ಫೆಬ್ರವರಿ 18ರಂದು ಬೆಂಗಳೂರಿನಲ್ಲಿ ವಿಧಿವಶರಾದರು. 1983ರ ಫೆ.22ರಂದು ಜನಿಸಿದ ತಾರಕರತ್ನ, ಒಕಟೋ ನಂಬರ್ ಕುರಾ›ಡು, ಭದ್ರಾದಿ ರಾಮುಡು, ಯುವರತ್ನ ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂದಮೂರಿ ಮೋಹನ್​ಕೃಷ್ಣ, ನಂದಮೂರಿ ಶಾಂತಿ ಮೋಹನ್ ದಂಪತಿಯ ಪುತ್ರ, ಹೆಸರಾಂತ ನಟ, ಮಾಜಿ ಸಿಎಂ ಎನ್​ಟಿಆರ್ ಮೊಮ್ಮಗ ತಾರಕರತ್ನ ಅವರು 2012ರಲ್ಲಿ ಅಲೇಖ್ಯಾ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದರು.

    ವಾಣಿ ಜೈರಾಮ್: ಹಲವು ಭಾರತೀಯ ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ವಾಣಿ ಜೈರಾಮ್ (77) ಫೆಬ್ರವರಿ 4ರಂದು ಚೆನ್ನೈನಲ್ಲಿ ನಿಧನ ರಾದರು. ಐದು ದಶಕಗಳ ಕಾಲ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ ಸೇರಿ 19 ಭಾಷೆಗಳಲ್ಲಿ ಹಾಡುಗಳಿಗೆ ಧ್ವನಿ ನೀಡಿದ್ದರು.

    ಪೃಥ್ವಿ ರಾಜ್ ಸಿಂಗ್ ಒಬೆರಾಯ್: ಒಬೆರಾಯ್ ಹೋಟೆಲ್​ಗಳು ಮತ್ತು ರೆಸಾರ್ಟ್​ಗಳ ಸಮೂಹದ (ಎಮಿರಿಟಸ್ ಆಫ್ ಒಬೆರಾಯ್ ಗ್ರೂಪ್- ಇಐಎಚ್) ಅಧ್ಯಕ್ಷ ಪೃಥ್ವಿ ರಾಜ್ ಸಿಂಗ್ ಒಬೆರಾಯ್ (94) ನವೆಂಬರ್ 14ರಂದು 94ನೇ ವಯಸ್ಸಿನಲ್ಲಿ ನಿಧನರಾದರು. 2002ರಲ್ಲಿ ಅವರು ತಮ್ಮ ತಂದೆ ಮತ್ತು ಸ್ಥಾಪಕ ಅಧ್ಯಕ್ಷ ಮೋಹನ್ ಸಿಂಗ್ ಒಬೆರಾಯ್ ಅವರ ಮರಣಾನಂತರ ಸಮೂಹದ ಚೇರ್ಮನ್ ಮತ್ತು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

    ಪ್ರಕಾಶ್ ಬಾದಲ್: ಶಿರೋಮಣಿ ಅಕಾಲಿದಳ ಪಕ್ಷದ ಮುಖ್ಯಸ್ಥ ರಾಗಿದ್ದ ಪ್ರಕಾಶ್ ಸಿಂಗ್ ಬಾದಲ್ (96) ಏಪ್ರಿಲ್ 25ರಂದು ಉಸಿರಾಟದ ಸಮಸ್ಯೆಯಿಂದ ಕೊನೆ ಯುಸಿರೆಳೆದರು. ನಾಲ್ಕು ಅವಧಿಗೆ ಪಂಜಾಬ್ ಮುಖ್ಯಮಂತ್ರಿ ಆಗಿದ್ದ ಇವರು ಪದ್ಮವಿಭೂಷಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts