

ಚಿಕ್ಕಬಳ್ಳಾಪುರ: ವಿರೋಧದ ನಡುವೆಯೂ ಎಚ್.ಎನ್.ವ್ಯಾಲಿ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆ ಯೋಜನೆ, ಮೆಡಿಕಲ್ ಕಾಲೇಜು, ಮಂಚೇನಹಳ್ಳಿ ತಾಲೂಕು ಘೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್, ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಮೆಗಾ ಡೇರಿ ಹೊಂದಿರುವ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಕಾರ್ಯಾರಂಭವು ಸಹಜವಾಗಿ ಖುಷಿಗೆ ಕಾರಣವಾಗಿದೆ.
ಪ್ರತ್ಯೇಕತೆಯ ಅಗತ್ಯತೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3.50 ಲಕ್ಷ ಲೀಟರ್ಗೂ ಹೆಚ್ಚು ಹಾಲು ಉತ್ಪಾದನೆಯಾದರೂ ಚಿಕ್ಕಬಳ್ಳಾಪುರವು ತನ್ನದೇ ಆದ ಜಿಲ್ಲಾ ಒಕ್ಕೂಟ ಹೊಂದಿರಲಿಲ್ಲ. ಕೋಚಿಮುಲ್ ಷೇರುಗಳಲ್ಲಿ 35 ಕೋಟಿ ರೂ. ಪಾಲು ಚಿಕ್ಕಬಳ್ಳಾಪುರಕ್ಕೆ ಸೇರುತ್ತದೆ. ಇನ್ನು 15 ಕೋಟಿ ರೂ. ಗೂ ಅಧಿಕ ಮೊತ್ತ ಅಭಿವೃದ್ಧಿ ನಿಧಿ ಇದ್ದು, ಮೀಸಲು ನಿಧಿಯಲ್ಲೂ ಪ್ರತ್ಯೇಕ ಪಾಲು ಇದೆ. ಎರಡು ಲಕ್ಷ ಲೀಟರ್ ಹಾಲು ಉತ್ಪಾದಿಸುವ ಚಾಮರಾಜನಗರ ಹಾಗೂ 50 ಸಾವಿರ ಲೀಟರ್ ಹಾಲು ಉತ್ಪಾದಿಸುವ ಬೀದರ್, ಕಲಬುರಗಿ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟಗಳಿವೆ. ಇದಕ್ಕೆ ಅನುಗುಣವಾಗಿ ಚಿಕ್ಕಬಳ್ಳಾಪುರ ಕೂಡ ಪ್ರತ್ಯೇಕ ಒಕ್ಕೂಟ ಹೊಂದುವುದು ಅಗತ್ಯವಿದ್ದು, ಆಡಳಿತಾತ್ಮಕ, ರೈತರ ಹಿತದೃಷ್ಟಿಯಿಂದ ಅನುಕೂಲವಾಗಿದೆ.
ಹೆಚ್ಚಿನ ಮೂಲಸೌಕರ್ಯ ಅಗತ್ಯ: ಪ್ರತ್ಯೇಕ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ರಚನೆ ಸಂದರ್ಭದಲ್ಲಿ ಹಾಲು ಉತ್ಪಾದಕರ ಹಿತ ಮತ್ತು ಮಾರುಕಟ್ಟೆ ಲಾಭದ ದೃಷ್ಟಿಯಿಂದ ಯಲಹಂಕ ಮದರ್ ಡೇರಿ ವ್ಯಾಪ್ತಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಪ್ರತ್ಯೇಕತೆಯಿಂದ ಒಕ್ಕೂಟಕ್ಕೆ ಸಿಗುವ ಪಾಲಿನ ಜತೆಗೆ ಬಂಡವಾಳ ಹೂಡಿಕೆ, ಮಾರುಕಟ್ಟೆ ನಿರ್ವಹಣೆ ಮತ್ತು ರೈತರಿಗೆ ಹಾಲು ನೀಡುವಿಕೆ ಸೇರಿ ಹಲವು ಕೆಲಸಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ, ಹಾಲಿಗೆ ಉತ್ತಮ ದರ ನೀಡುವಿಕೆ, ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಸಮೀಪದ ಮೆಗಾ ಡೇರಿ ಹೆಚ್ಚಿನ ನಿರ್ವಹಣೆಗೆ ವಿಶೇಷ ಅನುದಾನ ಅಗತ್ಯವಿದೆ ಎಂಬ ಮಾತು ಕೇಳಿ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಈಡೇರಿದೆ. ಈ ಭಾಗದ ಹೈನುಗಾರರಿಗೆ ಸ್ವಂತ ಸಹಕಾರ ಹಾಲು ಒಕ್ಕೂಟ ಸಿಕ್ಕಂತಾಗಿದೆ. ಇದು ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕವಾಗಿ ಬಹಳಷ್ಟು ಅನುಕೂಲವಾಗಲಿದೆ. ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಶ್ಲಾಘನೀಯ.
| ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ