

ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಶನಿವಾರ ಇಡೀ ದಿನ ನಡೆದ ರಾಜಕೀಯ ನಾಟಕಕ್ಕೆ ಮಧ್ಯರಾತ್ರಿ ತೆರೆಬಿದ್ದಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲಾಯಿತು.
ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಇಮ್ರಾನ್ ಖಾನ್ ಸರ್ಕಾರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವೇಳೆ ಭಾರಿ ಗದ್ದಲ, ಗೊಂದಲ ಉಂಟಾಯಿತು. ಪರಿಣಾಮ ಶನಿವಾರ ರಾತ್ರಿ 10 ಗಂಟೆವರೆಗೂ ಕಲಾಪ ಮುಂದೂಡಿಕೆಯಾಗಿತ್ತು. ಕೊನೆಗೂ ಇಮ್ರಾನ್ ಖಾನ್ ಬಹುಮತ ಸಾಬೀತು ಪಡಿಸುವಲ್ಲಿ ಸಫಲರಾಗಲಿಲ್ಲ. 342 ಸದಸ್ಯ ಬಲದ ಸದನದಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿ ವಿರೋಧ ಪಕ್ಷಗಳು 174 ಮತಗಳನ್ನು ಗಳಿಸಿದರು.
ಸಂಸತ್ತಿನಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭಾನುವಾರ (ಏ.10) 01:30 AM ಗೆ ಪದಚ್ಯುತಗೊಳಿಸಲಾಯಿತು. ಮತದಾನದ ಫಲಿತಾಂಶವನ್ನು ಸಂಸತ್ತಿನ ಕೆಳಮನೆಯ ಅಧ್ಯಕ್ಷ ಅಯಾಜ್ ಸಾದಿಕ್ ಪ್ರಕಟಿಸಿದರು.