

ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ, ಈ ಬಾರಿಯ ಬಜೆಟ್ ಜನಪ್ರಿಯ ಘೋಷಣೆಗಳಿಂದ ಕೂಡಿರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿದ ಬಜೆಟ್ನಲ್ಲಿ ಈ ನಿರೀಕ್ಷೆ ಸುಳ್ಳು ಮಾಡಿದ್ದು, ಯಾವುದೇ ದೊಡ್ಡ ಯೋಜನೆಗಳನ್ನಾಗಲಿ, ಜನಪ್ರಿಯ ಅಂಶಗಳನ್ನಾಗಲಿ ಘೋಷಿಸದೆ ವಿತ್ತೀಯ ಶಿಸ್ತು, ಸುಧಾರಣೆ ಕ್ರಮಗಳಿಗೆ ಆದ್ಯತೆ ನೀಡಿದ್ದಾರೆ. ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಪಟ್ಟಿ ಮಾಡುತ್ತಲೇ, ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಾಗುವುದು ಎಂದಿದ್ದಾರೆ.
ಈ ಬಜೆಟ್ನಲ್ಲಿ ಗಮನಸೆಳೆದ ಅಂಶವೆಂದರೆ, ವಿತ್ತ ಸಚಿವರ ಆತ್ಮವಿಶ್ವಾಸ ಮತ್ತು ಯಾವುದೇ ಗೊಂದಲಗಳಿಲ್ಲದೆ ಸ್ಪಷ್ಟತೆಯಿಂದ ಕೂಡಿದ ನೀತಿಗಳು. ‘ಚುನಾವಣೆ ಬಜೆಟ್’ನ ಮೊರೆ ಹೋಗದೆ, ಅವರು ಹಲವು ಸಂದೇಶ ರವಾನಿಸಿದ್ದಾರೆ. ಹತ್ತು ವರ್ಷಗಳಲ್ಲಿ ಮಾಡಿರುವ ಸುಧಾರಣೆಗಳು, ಆರ್ಥಿಕತೆಯ ಏರುಗತಿ, ಉದ್ಯೋಗ ಸೃಷ್ಟಿ ಸೇರಿದಂತೆ ಮಹತ್ವದ ಕ್ರಮಗಳೇ ಅಭಿವೃದ್ಧಿಯ ಇಂಜಿನ್ ಅನ್ನು ಸರಿಯಾದ ಹಾದಿಯಲ್ಲಿ ತೆಗೆದುಕೊಂಡು ಹೋಗಲಿವೆ ಎಂಬ ವಿಶ್ವಾಸ ವಿತ್ತ ಸಚಿವರದ್ದು. ಮೂಲಸೌಕರ್ಯ ರಂಗಕ್ಕೆ ಶೇಕಡ 11ರಷ್ಟು ಬಜೆಟ್ ಹೆಚ್ಚಿಸುವ ಮೂಲಕ, ರೈಲ್ವೆ, ವಿಮಾನಜಾಲದ ವಿಸ್ತರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ‘ಉಡಾನ್’ ಯೋಜನೆಯಡಿ ಮತ್ತಷ್ಟು ನಗರಗಳಲ್ಲಿ ವಿಮಾನನಿಲ್ದಾಣಗಳ ಸ್ಥಾಪನೆಯಾಗಲಿದೆ. ನಾಲ್ಕು ಸಾವಿರ ರೈಲ್ವೆ ಬೋಗಿಗಳಿಗೆ ವಂದೇಭಾರತ್ನ ಸೌಲಭ್ಯಗಳು ದೊರೆಯಲಿರುವುದರಿಂದ ಶ್ರೀಸಾಮಾನ್ಯರೂ ಉತ್ತಮ ಪ್ರಯಾಣದ ಅನುಭವ ಪಡೆಯಲು ಸಾಧ್ಯವಾಗಲಿದೆ. ಮೂರು ಕೋಟಿ ಮಹಿಳೆಯರನ್ನು ‘ಲಕ್ಷಾಧಿಪತಿ ದೀದಿ’ಯನ್ನಾಗಿಸಲು ನಿರ್ಧರಿಸಿರುವುದು, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಪೂರಕ ಹೆಜ್ಜೆ.
ಪ್ರಸಕ್ತ ಸ್ಥಿತಿಗತಿಯನ್ನು ಮಾತ್ರ ಈ ಬಜೆಟ್ ಬಿಂಬಿಸುತ್ತಿಲ್ಲ. ದೂರದೃಷ್ಟಿಯನ್ನು ಹೊಂದಿದ್ದು, 2047ರ ವೇಳೆಗೆ ಸಾಧಿಸಬೇಕಾದ ಗುರಿಗಳ ಕಡೆ ಗಮನ ನೀಡಲಾಗಿದೆ. ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ತಲುಪುವ ಬಗ್ಗೆ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಆರ್ಥಿಕತೆ ಏರಿಕೆಯ ಗ್ರಾಫ್ ನೋಡಿದರೆ, 2027ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಗುರಿ ತಲುಪುವುದು ಕಷ್ಟವೇನಲ್ಲ. ಕೃಷಿಗೆ ಕಳೆದ ವರ್ಷಕ್ಕಿಂತ ಕಡಿಮೆ ಅನುದಾನ ನೀಡಲಾಗಿದ್ದರೂ, ಕ್ಷೀರೋದ್ಯಮ, ಮತ್ಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಈ ರಂಗಗಳಲ್ಲಿ ಹೊಸ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ನವೋದ್ಯಮಗಳಿಗೆ ಪ್ರೋತ್ಸಾಹ ಮುಂದುವರಿದಿದ್ದು, ಯುವಸಮೂಹದ ಆಶೋತ್ತರಗಳಿಗೂ ಸ್ಪಂದಿಸಲಾಗಿದೆ. ಒಟ್ಟಾರೆ, ಭಾರತ ಅಭಿವೃದ್ಧಿಯ ಹಾದಿಯಲ್ಲಿ ದೃಢ ಹೆಜ್ಜೆ ಇರಿಸುತ್ತಿರುವ ಆತ್ಮವಿಶ್ವಾಸವನ್ನು ಈ ಬಜೆಟ್ ಬಿಂಬಿಸಿದೆ. ಚುನಾವಣೆಯ ಹೊತ್ತಲ್ಲೂ ಜನರನ್ನು ಓಲೈಸಲು ಮುಂದಾಗದೆ, ಭವಿಷ್ಯದ ದಾರಿಯತ್ತ ಗಮನ ಕೇಂದ್ರೀಕರಿಸಿರುವುದು ಆರ್ಥಿಕತೆಯ ಆಶಾವಾದವನ್ನು ಹೆಚ್ಚಿಸಿದೆ. ‘ಜುಲೈನಲ್ಲಿ ಪೂರ್ಣ ಬಜೆಟ್ ಮಂಡಿಸಲಾಗುವುದು’ ಎಂದು ಹೇಳುವ ಮೂಲಕ ನಿರ್ಮಲಾ ಸೀತಾರಾಮನ್ ಭವಿಷ್ಯದ ರಾಜಕೀಯ ಸಂದೇಶವನ್ನೂ ಗಟ್ಟಿ ದನಿಯಲ್ಲೇ ರವಾನಿಸಿದ್ದಾರೆ ಎನ್ನಬಹುದು.