ಹೃದಯಾಘಾತ: ಆಂಧ್ರ ಸಚಿವ ಮೇಕಪತಿ ಗೌತಮ್​ ರೆಡ್ಡಿ ನಿಧನ

New Project(8)
Published on

ಹೈದರಾಬಾದ್​: ಆಂಧ್ರಪ್ರದೇಶದ ಸಚಿವ ಮೇಕಪತಿ ಗೌತಮ್​ ರೆಡ್ಡಿ ಅವರು ಸೋಮವಾರ ಬೆಳಗ್ಗೆ ವಿಧಿವಶರಾದರು.

ಇಂದು ಮುಂಜಾನೆ ಗೌತಮ್​ ರೆಡ್ಡಿ ಅವರಿಗೆ ಎದೆನೋವು ಕಾಣಿಸಿಕೊಂಡು ಮನೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನ ಜೂಬ್ಲಿ ಹಿಲ್ಸ್​ನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟರಲ್ಲಿ ಹೃದಯಸ್ತಂಭನವಾಗಿತ್ತು. ಸಚಿವರು ಮೃತಪಟ್ಟಿದ್ದಾರೆ ಎಂದು ವೈದ್ಯರು 9.16ಕ್ಕೆ ಘೋಷಿಸಿದರು. ಗೌತಮ್​ ರೆಡ್ಡಿ ಅವರಿಗೆ 50 ವರ್ಷ ವಯಸ್ಸಾಗಿತ್ತು.

ಮಾಜಿ ಸಂಸದ ಮೇಕಪತಿ ರಾಜಮೋಹನ್​ ರೆಡ್ಡಿ ಅವರ ಪುತ್ರ ಗೌತಮ್​ ರೆಡ್ಡಿ ನೆಲ್ಲೂರು ಜಿಲ್ಲೆ ಆತ್ಮಾಕೂರು ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದರು. 2014 ಮತ್ತು 2019ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಜಗನ್​ ಮೋಹನ್​ ರೆಡ್ಡಿ ಸಂಪುಟದಲ್ಲಿ ಕೈಗಾರಿಕೆ ಮತ್ತು ಐಟಿ ಇಲಾಖೆಯ ಸಚಿವರೂ ಆಗಿದ್ದ ಗೌತಮ್​ ರೆಡ್ಡಿ, ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್​ಪೋ-2022 ನಲ್ಲಿ ಪಾಲ್ಗೊಂಡಿದ್ದರು. ಭಾನುವಾರವಷ್ಟೇ ದುಬೈನಿಂದ ಹೈದರಾಬಾದ್​ಗೆ ವಾಪಸ್​ ಆಗಿದ್ದರು.

ಗೌತಮ್​ ರೆಡ್ಡಿ ಸಾವಿನ ಸುದ್ದಿ ತೀವ್ರ ಆಘಾತ ನೀಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net