

ಕೊಪ್ಪಳ: ರಾಜಧಾನಿ ಮಾತ್ರವಲ್ಲದೆ ರಾಜ್ಯದ ಕೆಲವೆಡೆ ಕೂಡ ಬೀದಿನಾಯಿಗಳ ಹಾವಳಿ ಅತಿಯಾಗಿದ್ದು, ಮಕ್ಕಳು ಅವುಗಳ ದಾಳಿಗೆ ಗುರಿಯಾಗುತ್ತಿದ್ದಾರೆ. ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಬೀದಿನಾಯಿಗಳ ಹಿಂಡು ದಾಳಿ ನಡೆಸಿದ್ದಲ್ಲದೆ, ಆಕೆಯನ್ನು ಎಳೆದಾಡಿದ್ದೂ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಉಪ್ಪಾರ ಓಣಿಯಲ್ಲಿ ಈ ಘಟನೆ ನಡೆದಿದೆ. ಎಂಟು ವರ್ಷದ ಖುಷಿ ಎಂಬಾಕೆ ಬೀದಿನಾಯಿಗಳ ಹಿಂಡಿನ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈಕೆಯ ಮೇಲೆ ಏಕಕಾಲಕ್ಕೆ ನಾಲ್ಕೈದು ಬೀದಿನಾಯಿಗಳು ದಾಳಿ ಮಾಡಿವೆ.
ಬೀದಿನಾಯಿಗಳು ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಲಕಿಯ ಪ್ರಾಣ ಉಳಿದಿದ್ದೇ ಹೆಚ್ಚು ಎಂಬುದು ಕಂಡುಬಂದಿದೆ. ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿ ರಕ್ಷಿಸಿದ್ದಾರೆ.
ಗಂಗಾವತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಸಭೆ ಗಮನಕ್ಕೆ ತಂದರೂ ಅವರು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.