ಒಂದೇ ದಿನ 56 ಸಾವಿರ ರೋಗಿಗಳು ಚೇತರಿಕೆ: 50,000 ಗಡಿ ಸಮೀಪಿಸಿದ ಸಾವಿನ ಸಂಖ್ಯೆ

Coronavirsu
Published on

ನವದೆಹಲಿ: ಭಾರತದಲ್ಲಿ ಕರೊನಾ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿದ್ದರೂ ಗುಣಮುಖರ ಪ್ರಮಾಣ ಹೆಚ್ಚಿರುವುದರಿಂದ ಮೊದಲಿದ್ದ ಆತಂಕ ಕೊಂಚ ದೂರವಾಗಿದೆ. ಸುಮಾರು 15 ದಿನಗಳಿಂದ ಪ್ರತಿದಿನ 60 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿರುವ ನಡುವೆಯೇ, ಪ್ರತಿದಿನ ಸರಾಸರಿ 50 ಸಾವಿರ ರೋಗಿಗಳು ಗುಣಮುಖರಾಗುತ್ತಿದ್ದು, ಚೇತರಿಕೆಯ ಪ್ರಮಾಣ ಶೇಕಡ 71.61ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇಕಡ 1.94ಕ್ಕೆ ಇಳಿಕೆಯಾಗಿದೆ.

ಶುಕ್ರವಾರ 65 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, 56 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. 990 ಸಾವು ಸಂಭವಿಸಿದೆ. ಕಳೆದೊಂದು ತಿಂಗಳಿನಿಂದ ನಿತ್ಯ 800ರಿಂದ 900ಕ್ಕೂ ಅಧಿಕ ಮಂದಿ ಕರೊನಾಗೆ ಬಲಿಯಾಗುತ್ತಿದ್ದಾರೆ. ಕಳೆದ 24 ತಾಸಿನಲ್ಲಿ ಹೊಸದಾಗಿ 23 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 25.48 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 204 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 49,300ಕ್ಕಿಂತ ಅಧಿಕವಾಗಿದೆ. ಹೊಸದಾಗಿ 20 ಸಾವಿರ ರೋಗಿಗಳು ಗುಣಮುಖರಾಗುವುದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 18.28 ಲಕ್ಷಕ್ಕೆ ಏರಿಕೆಯಾಗಿದೆ. 6.70 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕರೊನಾಗೆ ಅತಿ ಹೆಚ್ಚು ಬಾಧಿತವಾಗಿರುವ ರಾಜ್ಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ಸಮೀಪಿಸುತ್ತಿದೆ. ತಮಿಳುನಾಡಿನಲ್ಲಿ 3.26 ಲಕ್ಷ, ಆಂಧ್ರಪ್ರದೇಶದಲ್ಲಿ 2.81 ಲಕ್ಷ, ಕರ್ನಾಟಕದಲ್ಲಿ 2.11 ಲಕ್ಷ, ದೆಹಲಿಯಲ್ಲಿ 1.50 ಲಕ್ಷ, ಉತ್ತರಪ್ರದೇಶದಲ್ಲಿ 1.50 ಲಕ್ಷ ಹಾಗೂ ಪಶ್ಚಿಮಬಂಗಾಳದಲ್ಲಿ 1.10 ಲಕ್ಷಕ್ಕೂ ಅಧಿಕ ಪ್ರಕರಣಗಳು ಈವರೆಗೆ ವರದಿಯಾಗಿವೆ.

ಮಹಾರಾಷ್ಟ್ರದ ಸಹಕಾರ ಸಚಿವ ಬಾಳಾಸಾಹೇಬ್ ಪಾಟೀಲ್​ಗೆ ಕರೊನಾ ಸೋಂಕು ದೃಢಪಟ್ಟಿದೆ. ಕರಡ್​ನಲ್ಲಿರುವ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಣಬ್, ಎಸ್​ಪಿಬಿ ಆರೋಗ್ಯ ಯಥಾಸ್ಥಿತಿ: ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ (ಎಸ್​ಪಿಬಿ) ಮತ್ತು ದೆಹಲಿಯ ಆರ್ವಿು ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆ ಒಳಗಾಗಿ ಹಾಗೂ ಕರೊನಾ ಸೋಂಕಿಗೆ ತುತ್ತಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಇದನ್ನೂ ಓದಿ: ಶುಕವನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಿದ ‘ಗಿಳಿ’ಗಳು

ಎಸ್​ಪಿಬಿ ಆರೋಗ್ಯದಲ್ಲಿ ತುಸು ಸುಧಾರಣೆ ಕಾಣುತ್ತಿದೆ ಎಂದು ಅವರ ಮಕ್ಕಳು ಶನಿವಾರ ಬೆಳಗ್ಗೆ ತಿಳಿಸಿದ್ದರು. ಆದರೆ, ಸಂಜೆ ಹೊತ್ತಿಗೆ ವಾರ್ತಾಪತ್ರ ಬಿಡುಗಡೆ ಮಾಡಿದ ಚೆನ್ನೈನ ಎಂಜಿಎಂ ಆಸ್ಪತ್ರೆ, ಎಸ್​ಪಿಬಿಯವರಿಗೆ ತೀವ್ರ ನಿಗಾ ಘಟಕದಲ್ಲಿ ಜೀವರಕ್ಷಕ ಸಾಧನ ಸಹಾಯವನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದೆ. ಈ ಮಧ್ಯೆ, ಎಸ್​ಪಿಬಿ ಪತ್ನಿ ಸಾವಿತ್ರಿಯವರಿಗೂ ಪಾಸಿಟಿವ್ ಕಾಣಿಸಿಕೊಂಡಿದೆ ಮೂಲಗಳು ತಿಳಿಸಿವೆ. ಎಸ್​ಪಿಪಿ ದಂಪತಿ ಶೀಘ್ರ ಗುಣಮುಖರಾಗಲೆಂದು ಅವರು ಅಭಿಮಾನಿಗಳು, ಹಿತೈಷಿಗಳು ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದಂದೇ ಪ್ರಧಾನಿ ಮೋದಿಯವರಿಗೆ ಕರೆ ಮಾಡಿದ್ದೇಕೆ ನೇಪಾಳ ಪ್ರಧಾನಿ !

ಪ್ರಣಬ್ ಮುಖರ್ಜಿ ಇನ್ನೂ ವೆಂಟಿಲೇಟರ್ ಸಹಾಯದಲ್ಲಿದ್ದು, ತಜ್ಞ ವೈದ್ಯರು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರ್ ಆಂಡ್ ಆರ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ತಮ್ಮ ತಂದೆಯ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದರೂ ಅವರ ಪ್ರತಿಕ್ರಿಯೆಯಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದು ಪ್ರಣಬ್ ಪುತ್ರಿ ಶರ್ವಿುಷ್ಠಾ ಮುಖರ್ಜಿ ಹೇಳಿದ್ದಾರೆ.

ವೈರಸ್ ಬೆಳವಣಿಗೆ ತಡೆಗೆ ಎಬ್ಸೆಲೆನ್ ಪರಿಣಾಮಕಾರಿ

ಮಹಾಮಾರಿ ಕರೊನಾ ವೈರಸ್​ಗೆ ಲಸಿಕೆ ಕಂಡು ಹಿಡಿಯಲು ಹಲವು ದೇಶಗಳು ಹರಸಾಹಸಪಡುತ್ತಿರುವ ನಡುವೆಯೇ, ಬೇರೆ ಕಾಯಿಲೆಗಳನ್ನು ಗುಣಪಡಿಸಲು ಲಭ್ಯವಿರುವ ಔಷಧದಿಂದ ಕರೊನಾ ಸೋಂಕನ್ನು ಗುಣಪಡಿಸಬಹುದು ಎಂಬ ಮಹತ್ವದ ಅಂಶವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಬೈಪೋಲಾರ್ ಡಿಸಾರ್ಡರ್ (ಮಾನಸಿಕ ಅಸ್ವಸ್ಥತೆ) ಮತ್ತು ಶ್ರವಣದೋಷ ಹೊಂದಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಎಬ್ಸೆಲೆನ್ ಔಷಧದಿಂದ ಕರೊನಾ ರೋಗಿಗಳನ್ನು ಗುಣಪಡಿಸಬಹುದು ಎಂಬ ವಿಜ್ಞಾನಿಗಳ ಸಂಶೋಧನಾ ವರದಿಯು ಸೈನ್ಸ್ ಅಡ್ವಾನ್ಸಸ್ ಜರ್ನಲ್​ನಲ್ಲಿ ಪ್ರಕಟವಾಗಿದೆ. ಸೋಂಕಿತರಲ್ಲಿ ಕರೊನಾ ವೈರಸ್ ಸಂಖ್ಯೆ ವೃದ್ಧಿಸದಂತೆ ಎಬ್ಸೆಲೆನ್ ಔಷಧ ತಡೆಯುತ್ತದೆ ಎಂದು ಈ ಕುರಿತು ಅಧ್ಯಯನ ನಡೆಸಿರುವ ತಂಡ ಹೇಳಿದೆ.

ಕರೊನಾ ವೈರಸ್​ನ ಚಕ್ರದಲ್ಲಿ ಅದರ ಪ್ರೋಟಿಯೇಸ್ ಎಂಪ್ರೋ ಮುಖ್ಯ ಪಾತ್ರ ವಹಿಸುವ ಕಿಣ್ವವಾಗಿದ್ದು, ವೈರಸ್​ಗೆ ಆರ್​ಎನ್​ಎ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಎಂಪ್ರೋ ನೀಡುತ್ತದೆ. ಈ ಕಾರಣದಿಂದಾಗಿಯೇ ಸೋಂಕಿತ ವ್ಯಕ್ತಿಯ ಜೀವಕೋಶಗಳಲ್ಲಿ ವೈರಸ್ ವೃದ್ಧಿಸುತ್ತದೆ ಎಂದು ಅಮೆರಿಕದ ಯುನಿವರ್ಸಿಟಿ ಆಫ್ ಷಿಕಾಗೊ ಸೇರಿದಂತೆ ಇತರ ತಜ್ಞರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಧುನಿಕ ಕಂಪ್ಯೂಟರ್​ಗಳ ಸಿಮ್ಯುಲೇಷನ್ ಮೂಲಕ ಕರೊನಾ ವೈರಸ್​ನ ಎಂಪ್ರೊ ವಿರುದ್ಧ ಕೆಲಸ ಮಾಡಬಲ್ಲ ಸಾವಿರಾರು ಸಂಯುಕ್ತಗಳನ್ನು ತಜ್ಞರು ಅಧ್ಯಯನ ನಡೆಸಿದ್ದರು. ಅವುಗಳಲ್ಲಿ ಎಬ್ಸೆಲೆನ್ ಔಷಧ ಎಂಪೊ› ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಬ್ಸೆಲೆನ್ ಮೇಲೆ ಈಗಾಗಲೇ ಅನೇಕ ಕ್ಲಿನಿಕಲ್ ಪ್ರಯೋಗಗಳು ನಡೆದಿದ್ದು, ಇದು ಮಾನವರ ಬಳಕೆಗೆ ಸುರಕ್ಷಿತ ಎಂಬುದೂ ಸಾಬೀತಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ ಕರೊನಾ ವಿರುದ್ಧ ಅದರ ಪರಿಣಾಮವನ್ನು ಪರೀಕ್ಷಿಸಲು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರೊನಾಗೂ ಮುಂಚೆಯೇ ರೋಗಲಕ್ಷಣ!: ಕರೊನಾ ಸೋಂಕು ದೃಢಪಡುವ ಮುಂಚೆಯೇ ಕೆಲ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಫ್ರಾಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್​ನಲ್ಲಿ ಪ್ರಕಟವಾದ ಅಧ್ಯಯನದ ವರದಿಯ ಪ್ರಕಾರ, ಕರೊನಾ ದೃಢಪಡುವ ಮೊದಲು ಸೋಂಕು ಶಂಕಿತರಲ್ಲಿ ಜ್ವರ, ಕೆಮ್ಮು, ಸ್ನಾಯು ನೋವು, ವಾಕರಿಕೆ, ವಾಂತಿ ಮತ್ತು ಅತಿಸಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂಥವರು ಆರೋಗ್ಯ ಹದಗೆಡುವ ಮೊದಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಔಷಧ ಮತ್ತು ಬಯೋಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಅಧ್ಯಯನದ ಸಹಲೇಖಕ ಪೀಟರ್ ಕುಹ್ನ ಹೇಳಿದ್ದಾರೆ.

ದೇಶಮೃತರ ಸಂಖ್ಯೆ- ಸೋಂಕಿನ ಸಂಖ್ಯೆ

ಅಮೆರಿಕ- 1,71,882 - 54,90,123

ಭಾರತ- 49,641 - 25,65,755

ರಷ್ಯಾ -15,617 - 9,17,884

ಮೆಕ್ಸಿಕೊ - 55,908 - 5,11,369

ಚಿಲಿ - 10,395 - 3,83,902

ಇರಾನ್ - 19,492 - 3,41,070

ಬ್ರಿಟನ್ - 41,361 - 3,17,379

ಸೌದಿ ಅರೇಬಿಯಾ - 3,369 -2,97,315

ಪಾಕಿಸ್ತಾನ -6,162 - 2,88,047

ವಿಶ್ವಾದ್ಯಂತ -7,65,201 -2,14,49,766

ರಾಜ್ಯಮೃತರ ಸಂಖ್ಯೆಸೋಂಕಿನ ಸಂಖ್ಯೆ

ತಮಿಳುನಾಡು - 5,641 - 3,32,105

ಆಂಧ್ರಪ್ರದೇಶ - 2,562 - 2,81,817

ಕರ್ನಾಟಕ - 3,831 - 2,19,926

ದೆಹಲಿ - 4,188 - 1,51,928

ಉತ್ತರಪ್ರದೇಶ - 2,393 - 1,50,061

ಪಶ್ಚಿಮ ಬಂಗಾಳ - 2,377 - 1,13,432

ಬಿಹಾರ - 515 - 1,01,906

ತೆಲಂಗಾಣ - 684 - 90,259

ಗುಜರಾತ್ - 2,765 - 77,663

ದೇಶಾದ್ಯಂತ - 49,641 - 25,65,755

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net