ಮಾಹಿ...ನಿಮ್ಮ ಹೆಲಿಕಾಪ್ಟರ್​ ಶಾಟ್​​ನ್ನು ಕ್ರಿಕೆಟ್​ ಲೋಕ ಮಿಸ್​ ಮಾಡಿಕೊಳ್ಳಲಿದೆ: ಅಮಿತ್​ ಷಾ

Amith Shah
Published on

ಭಾರತ ಕ್ರಿಕೆಟ್​ ತಂಡದ ಯಶಸ್ವಿ ನಾಯಕನಾಗಿದ್ದ, ಕೂಲ್​ ಕ್ಯಾಪ್ಟನ್​ ಎಂದೇ ಹೆಸರು ಮಾಡಿದ್ದ ಮಹೇಂದ್ರ ಸಿಂಗ್​ ಧೋನಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಧೋನಿ ನಿವೃತ್ತಿ ಬಳಿಕ ಹಲವು ಗಣ್ಯರು ಸೋಷಿಯಲ್​ ಮೀಡಿಯಾಗಳ ಮೂಲಕ ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಹಾಗೇ..ಇನ್ನು ಮುಂದೆ ಧೋನಿ ಆಟವನ್ನು ಮಿಸ್​ ಮಾಡಿಕೊಳ್ಳುವುದಾಗಿ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ಗೆ ಮಹೇಂದ್ರ ಸಿಂಗ್​ ಧೋನಿ ಕೊಟ್ಟ ಕೊಡುಗೆ ಅತ್ಯದ್ಭುತ ಎಂದು ಶ್ಲಾಘಿಸುತ್ತಿದ್ದಾರೆ.

ಗೃಹ ಸಚಿವ ಅಮಿತ್​ ಷಾ ಅವರೂ ಕೂಡ ಎರಡು ಟ್ವೀಟ್​ ಮಾಡಿ, ಮಾಹಿ..ಇನ್ನು ಮುಂದೆ ನಿಮ್ಮ ಹೆಲಿಕಾಪ್ಟರ್​ ಶಾಟ್​​ನ್ನು ಇಡೀ ವಿಶ್ವ ಕ್ರಿಕೆಟ್​ ಲೋಕ ಮಿಸ್ ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಡಿಜೆ ಹಳ್ಳಿ ಗಲಭೆಕೋರರಿಗೆ ಶಿಕ್ಷೆ ಕೊಡಿಸುವುದನ್ನು ಬಿಟ್ಟು ನಮ್ಮ ಮೇಲ್ಯಾಕೆ ಆರೋಪ ಮಾಡುತ್ತೀರಿ?’-ಕಾಂಗ್ರೆಸ್​ ಕಿಡಿ

ಭಾರತೀಯ ಕ್ರಿಕೆಟ್​ ಕ್ಷೇತ್ರಕ್ಕೆ ಸಾಟಿಯಿಲ್ಲದಷ್ಟು ಕೊಡುಗೆ ನೀಡಿದ ಎಂ.ಎಸ್​.ಧೋನಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿರುವ ವಿಶ್ವದ ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳಲ್ಲಿ ನಾನೂ ಒಬ್ಬ. ಧೋನಿಯವರ ಶಾಂತ ಸ್ವಭಾವದಿಂದ ಭಾರತೀಯ ಕ್ರಿಕೆಟ್​ ತಂಡಕ್ಕೆ ಅದೆಷ್ಟೋ ಸಹಾಯವಾಗಿದೆ. ಅವರ ನಾಯಕತ್ವದಲ್ಲಿ ಭಾರತ ಎರಡು ಬಾರಿ ವಿಶ್ವಕಪ್​ ಗೆದ್ದಿದೆ ಎಂದು ನೆನಪಿಸಿಕೊಂಡರು.

ಧೋನಿ ತಮ್ಮ ವಿಭಿನ್ನ ಆಟದ ಶೈಲಿಯಿಂದ ಅನೇಕ ಅಭಿಮಾನಿಗಳ ಮನಸಲ್ಲಿ ಉಳಿಯಲಿದ್ದಾರೆ. ಅವರೀಗ ನಿವೃತ್ತಿಹೊಂದಿದ್ದರೂ ಭಾರತೀಯ ಕ್ರಿಕೆಟ್​​ನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುತ್ತಾರೆಂಬ ಭರವಸೆ ಇದೆ. ಅವರ ಭವಿಷ್ಯಕ್ಕೆ ಒಳಿತು ಬಯಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net