

| ಮೃತ್ಯುಂಜಯ ಕಪಗಲ್ ಬೆಂಗಳೂರು
ಕರೊನಾ 2ನೇ ಅಲೆ ನಿಯಂತ್ರಣದ ಸಲುವಾಗಿ ಜಾರಿಗೊಳಿಸಿದ ಕಠಿಣ ನಿರ್ಬಂಧಗಳಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ಭಾರೀ ಪೆಟ್ಟುಬಿದ್ದಿದ್ದು, ಪ್ರಮುಖ ಆದಾಯ ಮೂಲಗಳು ಬತ್ತಿಹೋಗಿವೆ. ರಾಜ್ಯದ ಖಜಾನೆಯ ಸದ್ಯದ ಸನ್ನಿವೇಶ ಉಸಿರುಗಟ್ಟಿಸುವಂತಿದ್ದು, ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ ಪರಿಣಾಮ ಏ. 27ರಿಂದ ಮೇ 23ರ ನಡುವಿನ ಅವಧಿಯಲ್ಲಿ 5,000 ಕೋಟಿ ರೂ. ಆದಾಯ ನಷ್ಟ ಅಂದಾಜಿಸಲಾಗಿದೆ. ಜನರ ಜೀವ-ಜೀವನ ರಕ್ಷಿಸುವ ಸಲುವಾಗಿ ಸರ್ಕಾರ ಜಾರಿ ಮಾಡಿದ್ದ ಲಾಕ್ಡೌನ್ ಭಾನುವಾರ ತಡರಾತ್ರಿ ಕೊನೆಗೊಂಡಿದ್ದು, ನಿರೀಕ್ಷೆಯಂತೆ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಜೂ.7ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಮೇ ತಿಂಗಳ ರಾಜಸ್ವ ಸಂಗ್ರಹಣೆಯಲ್ಲಿ ಶೇ.80ರಷ್ಟು ಕೈತಪು್ಪವ ಅಪಾಯ ತಲೆದೋರಿದೆ.
ತಪ್ಪದ ಹೊಡೆತ: ಸೀಮಿತ ಅವಧಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಕೆಲವೊಂದು ಉದ್ಯಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದರೂ, 2021-22ನೇ ಆರ್ಥಿಕ ವರ್ಷದ ಮೊದಲ ತಿಂಗಳಿಂದಲೇ ಹೊಡೆತ ಬೀಳುವುದು ತಪ್ಪಿಲ್ಲ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣ ತಯಾರಿಸುವ ಫ್ಯಾಕ್ಟರಿ, ಔಷಧ ಅಂಗಡಿಗಳಿಗೆ ಲಭಿಸಿದ ಅವಕಾಶದಿಂದ ಸ್ವಲ್ಪಮಟ್ಟಿಗೆ ತೆರಿಗೆ ಸಂಗ್ರಹಿಸಬಹುದು. ಉಳಿದಂತೆ ವಾಣಿಜ್ಯ ವಹಿವಾಟು, ಹೋಟೆಲ್-ವಸತಿ ಗೃಹ, ಪ್ರವಾಸೋದ್ಯಮ, ಅಂತಾರಾಷ್ಟ್ರೀಯ, ಅಂತರ್ ರಾಜ್ಯ, ಅಂತರ ಜಿಲ್ಲಾ ಸಂಚಾರ ಪೂರ್ಣ ಸ್ಥಗಿತದಿಂದ ವ್ಯವಹಾರ ಪೂರ್ಣ ಸ್ಥಗಿತವಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ರಾಜ್ಯ ಸರ್ಕಾರ ಸ್ವಂತ ತೆರಿಗೆ ಮೂಲಗಳಿಂದ 1,24,201 ಕೋಟಿ ರೂ ಸಂಗ್ರಹದ ನಿರೀಕ್ಷೆ ಹೊಂದಿತ್ತು. ಈ ಲೆಕ್ಕಾಚಾರವನ್ನು ಕರೊನಾ ಮತ್ತೊಮ್ಮೆ ತಲೆಕೆಳಗು ಮಾಡಿದೆ ಎಂಬ ಆರ್ಥಿಕ ತಜ್ಞರ ಮಾತಿಗೆ ಆರ್ಥಿಕ ಇಲಾಖೆ ಮೂಲಗಳು ಸಹಮತ ವ್ಯಕ್ತಪಡಿಸಿವೆ.
ಬತ್ತಿದ ಒರತೆ: ಕರೊನಾ 2ನೇ ಅಲೆ, ಲಾಕ್ ಡೌನ್ ಪರಿಣಾಮ ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಒರತೆ ಬತ್ತಿ ಹೋಗಿದೆ. ಬೇರೆ ಮೂಲಗಳಿಗೆ ಹೋಲಿಸಿದರೆ ಆಬಕಾರಿ ಇಲಾಖೆಯಲ್ಲಿ ಮಾತ್ರ ಆದಾಯ ನಷ್ಟ ಕಡಿಮೆಯಿದೆ ಎಂದು ಸಮಾಧಾನ ಮಾಡಿಕೊಳ್ಳಬಹುದಷ್ಟೇ. ವಾಣಿಜ್ಯ, ಮೋಟಾರು ವಾಹನ, ಅಬಕಾರಿ, ತೈಲ ಮಾರಾಟ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಶೇಖರಣೆ ಇಳಿಮುಖವಾಗಿದೆ. ರಾಜಸ್ವ ಸಂಗ್ರಹಣೆ ಪ್ರಮುಖ ಮೂಲಗಳಿಂದ ಮಾಸಿಕ 10,000 ಕೋಟಿ ರೂ. ಸಂಗ್ರಹದ ಗುರಿಯಿದ್ದು, ಮೇ ಪೂರ್ತಿ ಲಾಕ್ ಡೌನ್ ವಿಧಿಸಿರುವ ಕಾರಣಕ್ಕೆ ಆದಾಯ ನಷ್ಟ ಇನ್ನಷ್ಟು ಹೆಚ್ಚುವುದು ನಿಶ್ಚಿತವೆಂದು ಆರ್ಥಿಕ ತಜ್ಞರು ಹೇಳುತ್ತಾರೆ.
ನೆರೆಯ ಕೆಲವು ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಡೀಸೆಲ್ ದರ 1-2 ರೂ. ಕಡಿಮೆಯಿದ್ದು, ಹೀಗಾಗಿ ಸರಕು ಸಾಗಣೆ ವಾಹನಗಳು ಬೇರೆ ರಾಜ್ಯಕ್ಕೆ ಹೋಗುವ ಮಾರ್ಗದ ಮಧ್ಯೆ ಕರ್ನಾಟಕದಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದವು. ಜತೆಗೆ ಖಾಸಗಿ ವಾಹನಗಳ ಓಡಾಟ ಬಹುಪಾಲು ಕಡಿತವಾಗಿ ಪೆಟ್ರೋಲ್ ವಹಿವಾಟು ಕುಸಿದಿದೆ. ರಾಜ್ಯಕ್ಕೆ ತೈಲ ಮಾರಾಟದಿಂದ ಮಾಸಿಕ 1,300 ಕೋಟಿ ರೂ. ಆದಾಯವಿದೆ. ಆದರೆ, ಲಾಕ್ಡೌನ್ನಿಂದಾಗಿ ಈ ವಲಯದಿಂದಲೂ 300 ಕೋಟಿ ರೂ.ಗೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಬತ್ತಿದ ಆದಾಯ ಮೂಲ: ಪ್ರಸಕ್ತ ವರ್ಷದ ವಾಣಿಜ್ಯ ತೆರಿಗೆ ಸಂಗ್ರಹ ಅಂದಾಜು76,473 ಕೋಟಿ ರೂ. ಅಂದರೆ ಮಾಸಿಕ 6,300 ಕೋಟಿ ರೂ.ಗಳಾಗಲಿದ್ದು, ಏ.27ರಿಂದ ಮೇ 2ನೇ ವಾರದವರೆಗೆ 3,700 ಕೋಟಿ ರೂ. ನಷ್ಟವಾಗಿದೆ. ತೈಲ ಮಾರಾಟದಿಂದ 1,300 ಕೋಟಿ ರೂ. ತೆರಿಗೆ ಸಂಗ್ರಹದ ನಿರೀಕ್ಷೆಯಿದ್ದು, 300 ಕೋಟಿ ರೂ. ಖೋತಾ ಆಗಿದೆ. ಏಪ್ರಿಲ್ನಲ್ಲಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಪಾವತಿ ಅವಧಿಯನ್ನು ಮೇ 31ರವರೆಗೆ ಮುಂದೂಡಲಾಗಿದೆ. ಏಪ್ರಿಲ್ನ 580 ಕೋಟಿ ರೂ. ಗುರಿಯಲ್ಲಿ 510 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಬೆರಳೆಣಿಕೆ ಆನ್ಲೈನ್ ನೋಂದಣಿ ಬಿಟ್ಟರೆ ಯಾವುದೇ ವಾಹನ ನೋಂದಣಿ ನಡೆಯುತ್ತಿಲ್ಲ. ಈ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ 580 ಕೋಟಿ ರೂ. ನಷ್ಟ ವಾಗುವ ಸಾಧ್ಯತೆಗಳಿವೆ. ಇನ್ನು ನೋಂದಣಿ ಮತ್ತು ಮುದ್ರಾಂಕ ಕಚೇರಿಗಳನ್ನು ಮುಚ್ಚಲಾಗಿದ್ದು, ನಿರೀಕ್ಷಿತ 800-1000 ಕೋಟಿ ರೂ. ಮಾಸಿಕ ಆದಾಯದಲ್ಲಿ 700 ಕೋಟಿ ರೂ. ಖೋತಾ ಆಗಿದೆ. ಅಬಕಾರಿ ಮಾಸಿಕ 2,000 ಕೋಟಿ ರೂ. ಸಂಗ್ರಹದ ಅಂದಾಜಿದ್ದು, ಸೀಮಿತ ಅವಧಿಗೆ ಮದ್ಯ ಪಾರ್ಸೆಲ್ಗೆ ಅವಕಾಶ ನೀಡಿದ್ದರೂ ದಿನಕ್ಕೆ ಸಂಗ್ರಹವಾಗುತ್ತಿದ್ದ 65 ಕೋಟಿ ರೂ. ತೆರಿಗೆ 50-55 ಕೋಟಿ ರೂ.ಗೆ ಇಳಿದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಜ್ಯದ ಸ್ವಂತ ಮೂಲಗಳ ರಾಜಸ್ವ ಸಂಗ್ರಹದ ಮೇಲೆ ಕರೊನಾ ದುಷ್ಪರಿಣಾಮ ಬೀರಿದೆ. ಲಾಕ್ಡೌನ್ನಿಂದಾಗಿ ವಾಣಿಜ್ಯ-ವಹಿವಾಟು ಸೇರಿದಂತೆ ವಿವಿಧ ವಲಯಗಳ ಆದಾಯ ಸಂಗ್ರಹಣೆ ಕುಸಿತವಾಗಿದೆ. ಮೇ 28ರ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಾಸಿಕ ನಷ್ಟ ಪರಿಹಾರದ ಜತೆಗೆ ಕರೊನಾದಿಂದಾದ ಹಾನಿ ಭರ್ತಿಯು ಚರ್ಚೆಯಾಗಲಿದೆ.
| ಬಿ.ಟಿ.ಮನೋಹರ್ ರಾಜ್ಯ ಜಿಎಸ್ಟಿ ಸಲಹಾ ಸಮಿತಿ ಸದಸ್ಯ