

ನವದೆಹಲಿ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಬಹುರಾಷ್ಟ್ರೀಯ ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಒಂದು ಮಗು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದು, ಸುಮಾರು 200 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳದಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ವಾಹನ ಮತ್ತು ಪೊಲೀಸ್ ಸಿಬ್ಬಂದಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದಾಗ ಮೂವರು ಮಾತ್ರ ಸಾವಿಗೀಡಾಗಿದ್ದರು, ಇದೀಗ ಸಾವಿನ ಸಂಖ್ಯೆ 9ಕ್ಕೇರಿದೆ.
ಎಲ್.ಜಿ ಪಾಲಿಮರ್ಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿಯು ವಿಶಾಖಪಟ್ಟಣಂ ಜಿಲ್ಲೆ ಆರ್ಆರ್ ವೆಂಕಟಪುರಂ ಸಮೀಪವಿದೆ. ಅವಘಡದ ಬಗ್ಗೆ ಮಾತನಾಡಿರುವ ಸ್ಥಳೀಯರು ವಿಷಾನಿಲ ಸೋರಿಕೆಯಿಂದ ಮೊದಲು ಕಣ್ಣು ಮಂಜಾಗಲು ಆರಂಭವಾಯಿತು. ಬಳಿಕ ಉಸಿರಾಡಲು ತುಂಬಾ ಸಮಸ್ಯೆಯಾಯಿತು ಎಂದು ಅಧಿಕಾರಿ ಬಳಿ ತಿಳಿಸಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರ ನಡುವೆ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಾಲ್ ಕಾರ್ಪೊರೇಷನ್ ಟ್ವೀಟ್ ಮಾಡಿ ಮುಂಜಾಗ್ರತ ಕ್ರಮವಾಗಿ ಕಾರ್ಖಾನೆ ಸಮೀಪದ ನಿವಾಸಿಗಳು ಮನೆಯಿಂದ ಹೊರಬರದಂತೆ ಮನವಿ ಮಾಡಿಕೊಂಡಿದೆ.
ಘಟನೆಯ ಪರಿಸ್ಥಿತಿಯನ್ನು ಕೆಲವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ಅದರಲ್ಲಿ ನೂರಾರು ಮಂದಿ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದು, ಆಂಬುಲೆನ್ಸ್ಗಾಗಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ, ಕಾರ್ಖಾನೆಯ ಎಚ್ಚರಿಕೆ ಗಂಟೆಯು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದು, ಉಸಿರಾಟದ ತೊಂದರೆಯಲ್ಲಿರುವವರನ್ನು ಮಾಸ್ಕ್ ಧರಿಸಿರುವ ಜನರು ಹೊರಕ್ಕೆ ಸಾಗಿಸುತ್ತಿರುವುದು ವಿಡಿಯೋದಲ್ಲಿದೆ. ಆಂಬುಲೆನ್ಸ್ ಬರೋವರೆಗೂ ಡಿವೈಡರ್ ಮೇಲೆ ಅಸ್ವಸ್ಥಗೊಂಡವರನ್ನು ಕೂರಿಸಲಾಯಿತು. (ಏಜೆನ್ಸೀಸ್)