ರೈತರಿಗೆ 5 ತಾಸು ನಿರಂತರ ವಿದ್ಯುತ್; ಸಿಎಂ ಸಿದ್ದರಾಮಯ್ಯ ಅಭಯ

Siddaramaiah
Published on

ಬೆಂಗಳೂರು: ರಾಜಧಾನಿ ಹೊರತುಪಡಿಸಿ ರಾಜ್ಯಾದ್ಯಂತ ವಿದ್ಯುತ್ ಅಭಾವ ಉಲ್ಬ, ರೈತರು ಹಾಗೂ ಗ್ರಾಮೀಣ ಜನರ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದ್ದಾರೆ. ಇಂಧನ ಇಲಾಖೆ ಅಧಿಕಾರಿಗಳ ಜತೆಗೆ ಶುಕ್ರವಾರ ಮಹತ್ವದ ಸಭೆ ನಡೆಸಿ ತುರ್ತು ತಾತ್ಕಾಲಿಕ ಪರಿಹಾರ ಸೂತ್ರ ರೂಪಿಸಿದ್ದಾರೆ. ಜತೆಗೆ, ವಿದ್ಯುತ್ ಕೊರತೆ ಸರಿದೂಗಿಸಲು ರಾಷ್ಟ್ರೀಯ ವಿಪತ್ತಿ ನಡಿಯಲ್ಲಿ ವಿದ್ಯುತ್ ಕಾಯ್ದೆ ಸೆಕ್ಷನ್ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿನ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಪಡೆಯಲು ಈ ಸೆಕ್ಷನ್ ಅನುವು ಮಾಡಿ ಕೊಡಲಿದ್ದು, ಬೇರೆಡೆ ಮಾರಾಟ ಮಾಡುವುದನ್ನು ನಿರ್ಬಂಧಿಸುತ್ತದೆ.

ಅಧಿಕಾರಿಗಳಿಗೆ ತರಾಟೆ: ಮಳೆ ಅಭಾವದಿಂದ ಜಲಮೂಲದ ವಿದ್ಯುತ್ ಉತ್ಪಾದನೆ ಕುಸಿಯುತ್ತದೆ. ಸೌರ, ಪವನ ಮೂಲವು ನಿಸರ್ಗವನ್ನು ಅವಲಂಬಿಸಿದೆ. ಬೇಡಿಕೆಯಿಲ್ಲದ ಅವಧಿಯಲ್ಲಿ ಶಾಖೋತ್ಪನ್ನ ಘಟಕಗಳ ನಿರ್ವಹಣೆ ಕೈಗೆತ್ತಿಕೊಂಡು, ಅಗತ್ಯಕ್ಕೆ ತಕ್ಕಷ್ಟು ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳಲಿಲ್ಲವೇಕೆ ? ಎಂದು ಸಿಎಂ ಪ್ರಶ್ನಿಸಿದ್ದಾರೆ. ತುರ್ತು ಸಂದರ್ಭಕ್ಕೆ ಅಗತ್ಯ ಯೋಜನೆ ಅಥವಾ ಪೂರ್ವಸಿದ್ಧತೆ ಮಾಡಿಕೊಂಡಿಲ್ಲವೆಂದು ಇಂಧನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್​ಗಳಲ್ಲಿ ಸರಬರಾಜು ಮಾಡಿದ್ದರೆ ಈಗಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅಧಿಕಾರಿಗಳು ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಅಸಮಾಧಾನ ಹೊರಹಾಕಿದ್ದಾರೆ.

ವೈಫಲ್ಯ, ಕುಂಠಿತಕ್ಕೆ ಕಾರಣ ಮನವರಿಕೆ: ಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಿಲ್ಲ. ಮಳೆ ಕೊರತೆಯಾಗಿ ಉತ್ಪಾದನೆ ಕುಂಠಿತವಾಗಿದೆ. ಈ ವಿಷಯವನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕು. ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಜವಾಬ್ದಾರಿ ಅರಿತುಕೊಂಡು ಕೆಲಸ ನಿರ್ವಹಿಸಬೇಕು. ಮುಖ್ಯ ಇಂಜಿನಿಯರ್​ಗಳು ಕ್ಷೇತ್ರ ಕಾರ್ಯಕ್ಕೆ ಇಳಿದು ವಿದ್ಯುತ್ ಪೂರೈಕೆ ಮತ್ತು ವಿತರಣೆ ಮೇಲ್ವಿಚಾರಣೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.

ವಿದ್ಯುತ್ ಕಳ್ಳತನ, ಸೋರಿಕೆ ಪ್ರಮಾಣ ಒಟ್ಟಾರೆ ಶೇಕಡ 13ರಷ್ಟಿದೆ. ವಿಚಕ್ಷಣಾ ದಳ ದಕ್ಷತೆಯಿಂದ ಕೆಲಸ ಮಾಡಿ ಈ ನಷ್ಟ ತಪ್ಪಿಸಬೇಕಾಗಿತ್ತು. ಇದೇ ಪರಿಸ್ಥಿತಿ ಮುಂದುವರಿದರೆ ಸಹಿಸುವುದಿಲ್ಲ ಎಂದು ಗರಂ ಆಗಿ ಹೇಳಿದರು.

ಅಧಿಕಾರಿಗಳ ಪ್ರಸ್ತಾವಕ್ಕೆ ಸಮ್ಮತಿ: ವಿದ್ಯುತ್ ಬವಣೆ ತುರ್ತಾಗಿ ನೀಗಿಸಲು ಮಾಡಿಕೊಂಡಿರುವ ಸಿದ್ಧತೆಯನ್ನು ಇಲಾಖೆ ಅಧಿಕಾರಿಗಳು ವಿವರಿಸಿದಾಗ ಸಿಎಂ ಸಿದ್ದರಾಮಯ್ಯ ಮರುಮಾತಿಲ್ಲದೆ ಸಮ್ಮತಿಸಿದ್ದಾರೆ.

ಉತ್ತರಪ್ರದೇಶದಿಂದ 300 ಮೆಗಾ ವಾಟ್, ಪಂಜಾಬ್​ನಿಂದ 600 ಮೆವಾ ವಿದ್ಯುತ್ ವಿನಿಮಯದಡಿ ಪಡೆಯಲಾಗುತ್ತಿದೆ. ಈಗ ರಾಜ್ಯ ಪಡೆದ ವಿದ್ಯುತ್ ಮುಂದಿನ ಮುಂಗಾರಿಗೆ ಆಯಾ ರಾಜ್ಯಕ್ಕೆ ಮರಳಿಸಲಿದೆ.

ಅಲ್ಲದೆ, 1300 ರಿಂದ 1,500 ಮೆವಾ ವಿದ್ಯುತ್ ಅಲ್ಪಾವಧಿಗೆ ಖರೀದಿಸಲು ಕೆಇಆರ್​ಸಿ ಅನುಮೋದನೆ ಪಡೆದು, ಮುಂದಿನ ಕ್ರಮವಹಿಸಲಾಗುತ್ತದೆ. ಹತ್ತು ಲಕ್ಷ ಟನ್ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಜಾಗತಿಕ ಟೆಂಡರ್ ಕರೆದಿದ್ದು, ದೇಶೀಯ ಕಲ್ಲಿದ್ದಿಲಿಗೆ ಶೇ.30ರಷ್ಟು ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡಿ ಶಾಖೋತ್ಪನ್ನ ಸ್ಥಾವರಗಳಿಗೆ ಬಳಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

800 ಮೆವಾ ಲಭ್ಯ: ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳಿಂದ ಅಂದಾಜು 800 ಮೆ.ವಾ. ವಿದ್ಯುತ್ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹಿಂದಿನ ಸರ್ಕಾರದ ವಿರುದ್ಧ ಚಾರ್ಜ್​ಶೀಟ್

  • ಕಳೆದ ಐದು ವರ್ಷಗಳಿಂದ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ ಕೇವಲ ನಾಲ್ಕು ಸಾವಿರ ಮೆಗಾ ವಾಟ್ ಹೆಚ್ಚಳ
  • ನವೀಕರಿಸಬಹುದಾದ ಇಂಧನದಡಿ ಖಾಸಗಿ ವಲಯದಲ್ಲಿ ಯಾವುದೇ ಹೊಸ ವಿದ್ಯುತ್ ಖರೀದಿ ಒಪ್ಪಂದಗಳಾಗಿಲ್ಲ
  • ಒಡಿಶಾದಲ್ಲಿರುವ ಮಂದಾಕಿನಿ ಕ್ಯಾಪ್ಟಿವ್ ಗಣಿಯಿಂದ ಕಲ್ಲಿದ್ದಲು ಪಡೆಯಲು ಅನುಸರಣೆಯಾಗಿಲ್ಲ
  • ಛತ್ತೀಸಗಢ ಪಿಟ್ ಹೆಡ್ ಪವರ್ ಪ್ಲಾ್ಯಂಟ್​ನಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ
  • ಕುಸುಮ್​ಸಿ ಅಡಿಯಲ್ಲಿ ಸೌರ ವಿಕೇಂದ್ರೀಕೃತ ಸ್ಥಾವರವು 3,37,508 ಪಂಪ್​ಸೆಟ್​ಗಳಿಗೆ ಮಂಜೂರಾಗಿದ್ದರೂ ಅನುಷ್ಠಾನವಾಗಿಲ್ಲ
  • 2020-21ರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದ ಏಳು ಸಾವಿರ ಸ್ಟಾ್ಯಂಡ್ ಅಲೋನ್ ಸೌರ ಪಂಪ್​ಸೆಟ್​ಗಳ ಅಳವಡಿಕೆಯಾಗಿಲ್ಲ, ಇತರೆ ರಾಜ್ಯಗಳಿಗೆ ಒಂದು ಲಕ್ಷ ಪಂಪ್​ಸೆಟ್​ಗಳ ಹಂಚಿಕೆಯಾಗಿದೆ.
  • ರಾಜ್ಯದ ಪಾಲಿನ 150 ಮೆ.ವಾ. ವಿದ್ಯುತ್ ನವದೆಹಲಿಗೆ ಹಂಚಿಕೆ
  • ವಿದ್ಯುತ್ ಉತ್ಪಾದನೆ ವೃದ್ಧಿಯತ್ತ ಹೆಜ್ಜೆ
  • ಯಲಹಂಕ ಅನಿಲ ಆಧಾರಿತ 370 ಮೆ.ವಾ. ವಿದ್ಯುತ್ ಉತ್ಪಾದನಾ ಘಟಕ ಕಾರ್ಯಾಚರಣೆಗೆ ಕ್ರಮ
  • ವಿಕೇಂದ್ರೀಕೃತ ಸೌರ ವಿದ್ಯುತ್ ಮೂಲಕ ಐಪಿ ಸೆಟ್​ಗಳಿಗೆ ಪೂರೈಕೆಗಾಗಿ ಕುಸುಮ್​ಸಿ ಅಡಿಯಲ್ಲಿ ಮೊದಲ ಹಂತದಲ್ಲಿ 1300 ಮೆ.ವಾ., ಎರಡನೇ ಹಂತದಲ್ಲಿ 1,200 ಮೆ. ಉತ್ಪಾದನೆಗೆ ಯೋಜನೆ
  • ಪಾವಗಡದಲ್ಲಿ ಹೆಚ್ಚುವರಿ 300 ಮೆ.ವಾ. ಕಲಬುರಗಿಯಲ್ಲಿ 500 ಮೆ.ವಾ. ಸೋಲಾರ್ ಪಾರ್ಕ್ ಸ್ಥಾಪನೆ
  • ಶರಾವತಿಯಲ್ಲಿ ಎರಡು ಸಾವಿರ ಮೆ.ವಾ ಪಂಪ್ಡ್ ಹೈಡ್ರೋ ಪ್ಲಾ್ಯಂಟ್ ಸ್ಥಾಪನೆಗಾಗಿ ಸಂಬಂಧಿಸಿದ ಇಲಾಖೆಗಳಿಂದ 2023ರ ಅಂತ್ಯದೊಳಗೆ ಅನುಮೋದನೆಗೆ ಪ್ರಯತ್ನ
  • ಛತ್ತೀಸ್​ಗಢದ ಗೋದ್ನಾದಲ್ಲಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಯನ್ನು ಖಾಸಗಿ/ ಜಂಟಿ ಹೂಡಿಕೆಯಡಿ ಕೈಗೊಳ್ಳಲು ಕ್ರಮ
  • ಇತರ ರಾಜ್ಯಗಳಲ್ಲಿನ ಒತ್ತಡ ಮುಕ್ತ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಖರೀದಿ ಪ್ರಸ್ತಾಪ

ವಿಜಯವಾಣಿ ವರದಿ ಪ್ರಸ್ತಾಪ: ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸಿರುವ ಕುರಿತು ವಿಜಯವಾಣಿ ವರದಿಯನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ ಸಿಎಂ, ವಿದ್ಯುತ್ ವಿಚಾರದಲ್ಲಿ ರೈತರು ಎಲ್ಲಿಯೂ ಪ್ರತಿಭಟನೆಗೆ ಇಳಿಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದರು.

ಪರಿಹಾರ ಸೂತ್ರ

  1. ನೀರಾವರಿ ಪಂಪ್​ಸೆಟ್​ಗಳಿಗೆ ಮೂರು ಪಾಳಿಗಳಲ್ಲಿ ನಿರಂತರ ಐದು ತಾಸು ವಿದ್ಯುತ್ ಪೂರೈಕೆ

2. ನೆರೆ ರಾಜ್ಯಗಳಿಂದ ವಿನಿಮಯ ಹಾಗೂ ಖರೀದಿ ಯೋಜನೆಯಡಿ ಕೊರತೆ ಸರಿದೂಗಿಸುವುದು

3. ವಿದ್ಯುತ್ ಕಾಯ್ದೆ ಸೆಕ್ಷನ್ 11 ಜಾರಿಗೊಳಿಸಿ ರಾಜ್ಯದ ಉತ್ಪಾದಕರಿಂದ ವಿದ್ಯುತ್ ಪಡೆಯಲು ಕ್ರಮ

4. ಲೋಡ್​ಶೆಡ್ಡಿಂಗ್ ಆಗದಂತೆ ನೋಡಿಕೊಳ್ಳಲು ಮುಖ್ಯ ಇಂಜಿನಿಯರ್ ಶ್ರೇಣಿ ಅಧಿಕಾರಿಗಳಿಗೆ ಹೊಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net