

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಬರುವವರು ತಪ್ಪು ವಿಳಾಸ ಮತ್ತು ಅಸ್ತಿತ್ವದಲ್ಲಿ ಇಲ್ಲದ ಮೊಬೈಲ್ ಸಂಖ್ಯೆ ನೀಡುತ್ತಿದ್ದಾರೆ. ಇದರಿಂದಾಗಿ 4,500ಕ್ಕೂ ಹೆಚ್ಚು ಸೋಂಕಿತರ ಪತ್ತೆ ಸಾಧ್ಯವಾಗಿಲ್ಲ. ನಗರದಲ್ಲಿ 37 ಸಾವಿರಕ್ಕೂ ಅಧಿಕ ಸೋಂಕಿತರಿದ್ದು, 4,500 ಸೋಂಕಿತರು ತಪ್ಪು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.
ಕಳೆದ 20 ದಿನಗಳಿಂದ ಪ್ರತಿನಿತ್ಯ 1ರಿಂದ 2 ಸಾವಿರ ಕರೊನಾ ಪ್ರಕರಣಗಳು ದೃಢವಾಗುತ್ತಿದ್ದು, ಸೋಂಕು ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ನಿತ್ಯ 6 ಸಾವಿರಕ್ಕೂ ಹೆಚ್ಚು ಸೋಂಕು ಪರೀಕ್ಷೆ ಮಾಡಲಾಗುತ್ತಿದ್ದು, ಗಂಟಲ ದ್ರವ ನೀಡುವವರ ಮೊಬೈಲ್ ನಂಬರ್ ಮತ್ತು ವಿಳಾಸ ಪಡೆಯಲಾಗುತ್ತಿದೆ.
ಮೃತದೇಹಗಳ ನಿರ್ವಹಣೆ ಕ್ರಮಗಳೇನು?: ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಗೌರವಯುತವಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿರುವ ಹೈಕೋರ್ಟ್, ಮೃತದೇಹಗಳ ನಿರ್ವಹಣೆಗೆ ಅನುಸರಿಸಲಾಗುತ್ತಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಸೂಚಿಸಿದೆ. ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ನಿಯಮಗಳನ್ನು ರೂಪಿಸಲಾಗಿದೆ. ಮುಂದಿನ ವಿಚಾರಣೆ ವೇಳೆ ಎಲ್ಲ ಮಾಹಿತಿಯನ್ನು ಒದಗಿಸುವುದಾಗಿ ಪಾಲಿಕೆ ಪರ ವಕೀಲರು ಪಿಐಎಲ್ ವಿಚಾರಣೆ ವೇಳೆ ತಿಳಿಸಿದರು. ಅದನ್ನು ದಾಖಲಿಸಿಕೊಂಡ ಪೀಠ, ಜು.27ಕ್ಕೆ ವಿಚಾರಣೆ ಮುಂದೂಡಿತು.
ಆದರೆ, ಸೋಂಕು ಪರೀಕ್ಷೆಗೆ ಒಳಗಾವುವವರಲ್ಲಿ ಕೆಲವರು ಅಸ್ತಿತ್ವದಲ್ಲಿ ಇರದ ಮೊಬೈಲ್ ನಂಬರ್, ಕರೆನ್ಸಿ ಇಲ್ಲದೆ ಒಳಬರುವ ಕರೆ ನಿಷೇಧಿಸಲಾಗಿರುವ, ವ್ಯಾಪ್ತಿ ಪ್ರದೇಶಕ್ಕೆ ಸಿಗದ ಹಾಗೂ ಬೇರೊಬ್ಬರ ನಂಬರ್ ಕೊಟ್ಟಿದ್ದಾರೆ. ಇನ್ನು ಕೆಲವರು ಕರೆ ಸ್ವೀಕರಿಸುವುದಿಲ್ಲ. ಬಹುತೇಕರು ತಪ್ಪು ವಿಳಾಸ ಕೊಟ್ಟು ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ.
ಸಮುದಾಯಕ್ಕೆ ಸೋಂಕು ಹರಡುವ ಆತಂಕ: ಕೋವಿಡ್ ಸಾಂಕ್ರಾಮಿಕ ರೋಗವಾಗಿದೆ. ಆದ್ದರಿಂದ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು, ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡುವುದು ಹಾಗೂ ಸೋಂಕಿತ ವ್ಯಕ್ತಿ ಸಂಚರಿಸಿದ ಸ್ಥಳವನ್ನು ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸುವ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿದೆ. ಆದರೆ, ಸೋಂಕು ದೃಢಪಟ್ಟವರೇ ಸಿಗದೆ, ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ಸೋಂಕು ನಿಯಂತ್ರಣ ಕಾರ್ಯಕ್ಕೆ ಅಡ್ಡಿಯಾಗಿರುವುದಲ್ಲದೆ, ಸೋಂಕಿತರ ಸಂಚಾರದಿಂದ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.
ಸೋಂಕಿತರ ಪತ್ತೆಗೆ ಡಿಸಿಪಿ ತಂಡ: ಕರೊನಾ ಪರೀಕ್ಷೆ ವೇಳೆ ತಪ್ಪು ವಿಳಾಸ ನೀಡಿದವರು, ತಪ್ಪು ಮೊಬೈಲ್ ನಂಬರ್ ನೀಡಿರುವ ಸೋಂಕಿತರನ್ನು ಪತ್ತೆ ಮಾಡಲು ವಲಯಕ್ಕೊಬ್ಬರಂತೆ ಡಿಸಿಪಿ ನೇತೃತ್ವದ ತಂಡ ನೇಮಕ ಮಾಡಲಾಗಿದೆ. ಅವರಿಗೆ ಸೋಂಕಿತರು ನೀಡಿರುವ ಮೊಬೈಲ್ ನಂಬರ್ ಕೊಟ್ಟು, ನೆಟ್ವರ್ಕ್ ಟ್ರೇಸ್ ಮಾಡಿ ಪತ್ತೆ ಹಚ್ಚಲು ನೆರವು ಪಡೆಯಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ತಿಳಿಸಿದ್ದಾರೆ