ಬಿಐಇಸಿ ಕರೊನಾ ಸೋಂಕಿತರ ಆರೈಕೆ ಕೇಂದ್ರದಲ್ಲಿ ಗೊಂದಲ: ಗುತ್ತಿಗೆದಾರರು ಬಿಬಿಎಂಪಿ ನಡುವೆ ದರ ಸಂಘರ್ಷ

BIEC Center
Published on

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನಾ ಕೇಂದ್ರದ (ಬಿಐಇಸಿ) ಕೋವಿಡ್ ಕೇರ್ ಸೆಂಟರ್​ನಲ್ಲಿ ಅಳವಡಿಸುವ ಮಂಚ, ಹಾಸಿಗೆ, ಫ್ಯಾನ್ ಸೇರಿ 6 ವಸ್ತುಗಳ ಖರೀದಿ ವಿಚಾರದಲ್ಲಿ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಮಧ್ಯೆ ತಿಕ್ಕಾಟ ಆರಂಭವಾಗಿದೆ. ಬಿಬಿಎಂಪಿ ನಿಗದಿ ಮಾಡಿರುವ ದರಕ್ಕೆ ವಸ್ತುಗಳನ್ನು ಒದಗಿಸಲು ಸಾಧ್ಯವಿಲ್ಲವೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ.

ಸಮಿತಿ ಸೂಚಿಸಿದ ದರಕ್ಕೆ ಗುತ್ತಿಗೆದಾರರ ವಿರೋಧ: ಸಮಿತಿ ನಿಗದಿ ಮಾಡಿರುವ ದರಕ್ಕೆ ಗುತ್ತಿಗೆದಾರರು ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಬಿಐಇಸಿ ಕೇಂದ್ರದಲ್ಲಿ ಅಳವಡಿಕೆ ಮಾಡಿರುವ 6,500 ಹಾಸಿಗೆಗೆ ಮುಖ್ಯಮಂತ್ರಿ ಹೇಳಿದಂತೆ 7,500 ರೂ. ದರದಲ್ಲಿ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ನಗರದಲ್ಲಿ ಸೋಂಕಿತರ ಸಂಖ್ಯೆ ದಿಢೀರನೆ ಹೆಚ್ಚಾದ ಕಾರಣ ವಿವಿಧೆಡೆ ಕರೊನಾ ಆರೈಕೆ ಕೇಂದ್ರ ತೆರೆಯಲು ಬಿಬಿಎಂಪಿ ಮುಂದಾಯಿತು. ಈ ವೇಳೆ ಬಿಐಇಸಿಯಲ್ಲಿ 10,100 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಕೋವಿಡ್ ಆರೈಕೆ ಕೇಂದ್ರ ನಿರ್ವಿುಸುವ ಯೋಜನೆ ರೂಪಿಸಿತು. ಇಲ್ಲಿ ಪ್ರತಿ ರೋಗಿಗೆ ಹಾಸಿಗೆ, ಮಂಚ, ಫ್ಯಾನ್, ಸೋಪು, ಮಾಸ್ಕ್, ಸ್ಯಾನಿಟೈಸರ್, ಕ್ಯಾಬಿನ್, ಬಕೆಟ್ ಸೇರಿ ಒಟ್ಟು 26 ವಸ್ತುಗಳನ್ನು ಪ್ರತಿನಿತ್ಯ 800 ರೂ.ಗಳಿಗೆ ಬಾಡಿಗೆ ಪಡೆಯುವುದಕ್ಕೆ ಗುತ್ತಿಗೆ ದಾರರಿಗೆ ಬಿಬಿಎಂಪಿ ಕಾರ್ಯಾದೇಶ ನೀಡಿದೆ. ಎಕೆಎಸ್, ಡಿಕೆಎಸ್, ರಾಜ ಮತ್ತು ಉಡುಪ ಎಂಟರ್​ಪ್ರೖೆಸಸ್​ನವರು 6,500 ಹಾಸಿಗೆ ವ್ಯವಸ್ಥೆಗೆ ನಿರ್ಮಾಣ ಕಾರ್ಯಆರಂಭಿಸಿದರು. ಸರ್ಕಾರ ಒಟ್ಟು 10,100 ಹಾಸಿಗೆ ನಿರ್ವಿುಸುವಂತೆ ವಿಸ್ತರಣೆ ಮಾಡಿತು.

ಆ ಪ್ರಕಾರ, ಬಿಬಿಎಂಪಿ 100 ದಿನಗಳಿಗೆ ಎಲ್ಲ ರೋಗಿಗಳ ಮೂಲಸೌಕರ್ಯಕ್ಕೆ 240 ಕೋಟಿ ರೂ. ಬಾಡಿಗೆ ಪಾವತಿಸಬೇಕಾಗಿತ್ತು. ದುಬಾರಿ ಬಾಡಿಗೆ ವೆಚ್ಚ ಪಾವತಿ ಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿ, ಅಗತ್ಯ 6 ವಸ್ತುಗಳನ್ನು 7,500 ರೂ.ಗೆ ಖರೀದಿ ಮಾಡಲು ಸೂಚಿಸಿದ್ದರು. ಜತೆಗೆ, ಸೂಕ್ತ ದರ ನಿಗದಿಗೆ ಕೋವಿಡ್ ಆರೈಕೆ ಕೇಂದ್ರದ ಉಸ್ತುವಾರಿ ರಾಜೇಂದ್ರ ಕಠಾರಿಯಾ, ಆಗಿನ ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ನೇತೃತ್ವದ ಸಮಿತಿ ರಚಿಸಿದ್ದರು. ಆ ಸಮಿತಿ 6 ವಸ್ತುಗಳ ಖರೀದಿಗೆ 4,800 ರೂ. ನಿಗದಿ ಮಾಡಿತ್ತು. ಉಳಿದ 19 ವಸ್ತುಗಳನ್ನು ಪ್ರತಿದಿನಕ್ಕೆ 200 ರೂ. ಬಾಡಿಗೆ ನೀಡುವಂತೆ ಆದೇಶಿಸಿತ್ತು. ಆದರೆ, ಇದಕ್ಕೆ ಗುತ್ತಿಗೆದಾರರಿಂದ ವಿರೋಧ ವ್ಯಕ್ತವಾಗಿದೆ.

ದರ ಬದಲಾವಣೆ ಸಾಧ್ಯವಿಲ್ಲ: ಬಿಐಇಸಿ ಕೇಂದ್ರಕ್ಕೆ ವಸ್ತುಗಳ ಖರೀದಿ ವಿಚಾರದಲ್ಲಿ ಸಿಎಂ ರಚಿಸಿದ್ದ ಅಧಿಕಾರಿಗಳ ಸಮಿತಿ, ಮಾರುಕಟ್ಟೆ ದರವನ್ನು ಸಮೀಕ್ಷೆ ನಡೆಸಿ 4,800 ರೂ. ನಿಗದಿ ಪಡಿಸಿದೆ. ಈಗ ಖರೀದಿ ದರದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಈಗಾಗಲೇ ನಿಗದಿ ಮಾಡಿರುವ ದರವನ್ನು ಬಿಬಿಎಂಪಿ ಪಾವತಿಸಲಿದೆ. ಪ್ರಸ್ತುತ 5 ಸಾವಿರ ಹಾಸಿಗೆ ಸಿದ್ಧವಾಗಿದ್ದು, ಸಾವಿರ ಹಾಸಿಗೆಯಲ್ಲಿ ಸೋಂಕಿತರನ್ನು ಆರೈಕೆ ಮಾಡಿಕೊಳ್ಳಲು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net