ಐಪಿಎಲ್ ಸೆಪ್ಟೆಂಬರ್ 19ರಂದು ಶುರು- ನವೆಂಬರ್​ನಲ್ಲಿ ಫೈನಲ್​?

ipl2020
Published on

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್​)ನ ಆಡಳಿತ ಸಮಿತಿಯ ಸಭೆ ಸೋಮವಾರ ನಡೆಯಲಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ನಡೆಸುವ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚೆಯೇ ಸಭೆಯ ಪ್ರಮುಖ ಕಾರ್ಯಸೂಚಿ. ಯುಎಇಯಲ್ಲಿ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಕ್ರಿಕೆಟ್ ಟೂರ್ನಿ ನಡೆಸುವ ಚಿಂತನೆ ಇದ್ದು. ಈ ಕುರಿತ ನಿರ್ಣಯವೂ ಇದೇ ಸಭೆಯಲ್ಲಿ ಆಗಲಿದೆ.

ಒಂದೇ ಕ್ರೀಡಾಂಗಣದಲ್ಲಿ ಎರಡು ಟೀಮ್​ಗಳು ಒಂದೇ ಸಲ ಆಡಬಹುದು. ಎರಡು ಸಲ ಮುಖಾಮುಖಿ ಇರುವುದಿಲ್ಲ. ದುಬೈ ಸ್ಪೋರ್ಟ್​ ಸಿಟಿಯ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಅಕಾಡೆಮಿಯಲ್ಲಿ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡಗಳ ಅಭ್ಯಾಸಕ್ಕೆ ಅನುಕೂಲಗಳನ್ನು ಮಾಡಿಕೊಳ್ಳಬಹುದು. ಪಂದ್ಯಗಳ ರೂಪುರೇಷೆ ಕುರಿತ ಚಿಂತನೆ ಇನ್ನೂ ನಡೆಯುತ್ತಿದ್ದು ಅಂತಿಮವಾಗಿಲ್ಲ ಎಂಬ ಅಂಶವನ್ನು ಐಪಿಎಲ್​ ಆಡಳಿತ ಸಮಿತಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಈ ಸಲದ ಐಪಿಎಲ್​ ಟೂರ್ನಿ ಸೆಪ್ಟೆಂಬರ್​ 19ರಿಂದ ಶುರುವಾಗಲಿದೆ. ಫೈನಲ್ ಮ್ಯಾಚ್​ ನವೆಂಬರ್ 8/10ರಂದು ನಡೆಯುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ ಒಟ್ಟು 60 ಪಂದ್ಯಗಳು ಇರಲಿವೆ. ಬಹುತೇಕ ಸಂಜೆ ಹೊತ್ತಿನಲ್ಲೇ ಮ್ಯಾಚ್​ಗಳು ನಡೆಯಲಿವೆ ಎನ್ನುತ್ತಿವೆ ಮೂಲಗಳು. ಈ ನಡುವೆ, ಪಂದ್ಯಗಳು ಯುಎಇನಲ್ಲೇ ನಡೆಯಲಿವೆ ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಚೇರ್ಮನ್ ಬ್ರಿಜೇಶ್ ಪಟೇಲ್ ದೃಢೀಕರಿಸಿದ್ದಾರೆ.

ಐಪಿಎಲ್ ಟೂರ್ನಿ ನಡೆಸುವ ಸಂಬಂಧ ಬಿಸಿಸಿಐನಿಂದ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಪಂದ್ಯಗಳ ಸಿದ್ಧತೆ ನಡೆಸುವುದಕ್ಕೆ ಫ್ರಾಂಚೈಸಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ದ ಎಮಿರೇಟ್ಸ್​ ಕ್ರಿಕೆಟ್ ಬೋರ್ಡ್ ಮೂಲಗಳು ತಿಳಿಸಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net