ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಟೀಕಿಸಿ, ಟ್ರೋಲ್ ಆದ ಪಾಕ್ ಕ್ರಿಕೆಟಿಗ ಸಲ್ಮಾನ್ ಭಟ್

jofra and butt for web
Published on

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಕಳೆದ ಒಂದು ವಾರದಿಂದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ದೇ ಹೆಚ್ಚು ಸುದ್ದಿ. ಸೌಥಾಂಪ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಮನೆಗೆ ತೆರಳಿ ಜೈವಿಕ ಸುರಕ್ಷಾ ನಿಯಮ ಉಲ್ಲಂಘಿಸಿ ಎಲ್ಲರ ಕೆಂಗಣ್ಣಿಗೆ ಆರ್ಚರ್ ಗುರಿಯಾಗಿದ್ದರು. ಇದಕ್ಕೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದಲೂ ಅವರನ್ನು ಕೈಬಿಡಲಾಗಿತ್ತು. ಜತೆಗೆ 5 ದಿನ ಐಸೋಲೇಷನ್‌ಗೆ ಕಳುಹಿಸಲಾಗಿತ್ತು. ಜೋಫ್ರಾ ಆರ್ಚರ್ ವರ್ತನೆಗೆ ಇಂಗ್ಲೆಂಡ್ ಕ್ರಿಕೆಟಿಗರಲ್ಲದೆ, ಹಲವು ಹಾಲಿ-ಮಾಜಿ ಕ್ರಿಕೆಟಿಗರು ಸಿಡಿಮಿಡಿಕೊಂಡಿದ್ದರು. ಇದೇ ರೀತಿ ಆರ್ಚರ್ ಅವರನ್ನು ಟೀಕಿಸಲು ಹೋಗಿ ಟ್ರೋಲ್ ಆಗಿದ್ದಾರೆ ಪಾಕಿಸ್ತಾನದ ಮಾಜಿ ನಾಯಕ, 2010ರ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿದ್ದ ಸಲ್ಮಾನ್ ಭಟ್.

2010ರ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್ ಭಟ್, ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡುತ್ತಾ, ಆರ್ಚರ್ ನಿಯಮ ಉಲ್ಲಂಘಿಸಬಾರದಿತ್ತು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ನೆಟ್ಟಿಗರು, 35 ವರ್ಷದ ಸಲ್ಮಾನ್ ಭಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೋಫ್ರಾ ಆರ್ಚರ್ ಅವರನ್ನು ಟೀಕಿಸುವ ಮೂಲಕ ಸಲ್ಮಾನ್ ಭಟ್ ದೊಡ್ಡ ಜೋಕ್ ಮಾಡುತ್ತಿದ್ದಾರೆ ಎಂದರೆ, ಕೆಲ ಮಂದಿ ಭಟ್ ಮಾತಿಗೆ ಪ್ರತಿಕ್ರಿಯಿಸಲು ನನ್ನ ಬಳಿ ಉತ್ತರವಿಲ್ಲ ಎಂದು ಕಾಲೆಳೆದಿದ್ದಾರೆ.

2010ರಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಲ್ಮಾನ್ ಭಟ್, ಮೊಹಮದ್ ಆಸಿಫ್ ಹಾಗೂ ಮೊಹಮದ್ ಅಮೀರ್‌ಗೆ ನಿಷೇಧ ಹೇರಲಾಗಿತ್ತು. ಶಿಕ್ಷೆ ಪೂರೈಸಿದ ಬಳಿಕ ಮೂವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದರು. ಆದರೆ, ಆಮೀರ್ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, 2019ರ ಏಕದಿನ ವಿಶ್ವಕಪ್ ಟೂರ್ನಿ ಆಡಿದ್ದರು. 2018ರಿಂದ ದೇಶೀಯ ಕ್ರಿಕೆಟ್‌ನಿಂದಲೂ ದೂರ ಉಳಿದಿರುವ ಸಲ್ಮಾನ್ ಭಟ್, ರಾಷ್ಟ್ರೀಯ ತಂಡಕ್ಕೆ ವಾಪಸಾಗುವುದು ಅನುಮಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net