ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!

race
Published on

ಮೆಲ್ಬೋರ್ನ್​: ಮೋಟಾರ್​ಸ್ಪೋರ್ಟ್ಸ್​ ಕ್ಷೇತ್ರದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಅದರಲ್ಲಿ ಮುಂದುವರಿಯಲು ಸಾಧ್ಯವಾಗದೆ ನೀಲಿಚಿತ್ರಗಳತ್ತ ಮುಖಮಾಡಿದ್ದ ಆಸ್ಟ್ರೇಲಿಯಾದ ರೇಸಿಂಗ್​ ಸುಂದರಿ ರೆನ್ನೀ ಗ್ರೇಸಿ, ಇದೀಗ ಮತ್ತೆ ಮೋಟಾರ್​ಸ್ಪೋರ್ಟ್ಸ್​​ಗೆ ಮರಳಲು ಸಜ್ಜಾಗಿದ್ದಾರೆ. ಪೋರ್ನ್​ ವೆಬ್​ಸೈಟ್​ಗಳ ಜತೆಗಿನ ಒಪ್ಪಂದದ ಪ್ರಕಾರ ತನ್ನ ನೀಲಿಚಿತ್ರಗಳನ್ನು ಹಂಚಿಕೊಳ್ಳುತ್ತ ಉತ್ತಮ ಸಂಪಾದನೆಯನ್ನೇ ಮಾಡಿರುವ ಗ್ರೇಸಿ, ಸೂಪರ್​ಕಾರ್​ ಡ್ರೈವರ್​ ಆಗಿ ಮತ್ತೆ ಸ್ಪರ್ಧಾಕಣಕ್ಕಿಳಿಯಲು ಬಯಸಿದ್ದಾರೆ.

ಹೊಸ ವೃತ್ತಿಜೀವನದಿಂದಾಗಿ ತಮ್ಮ ಬ್ಯಾಂಕ್​ ಖಾತೆಯಲ್ಲಿ ಈಗ ಸಾಕಷ್ಟು ಹಣವಿದೆ ಎಂದಿರುವ 25 ವರ್ಷದ ರೆನ್ನೀ ಗ್ರೇಸಿ, ತಮ್ಮ ನೆಚ್ಚಿನ ಮೋಟಾರ್​ಸ್ಪೋರ್ಟ್ಸ್​​ನಲ್ಲೇ ಮತ್ತೆ ತೊಡಗಿಸಿಕೊಳ್ಳುವ ಆರ್ಥಿಕ ಶಕ್ತಿಯನ್ನೂ ಪಡೆದುಕೊಂಡಿದ್ದಾರೆ. 'ನಾನು ಈಗ ಆರ್ಥಿಕ ಭದ್ರತೆಯನ್ನು ಹೊಂದಿದ್ದೇನೆ. ಯಾವುದೇ ಹೆದರಿಕೆ ಇಲ್ಲದೆ ನಾನು ಈಗ ರೇಸಿಂಗ್​ನಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ರೇಸಿಂಗ್​ ಕಾರುಗಳ ವೆಚ್ಚದ ಬಗ್ಗೆ ನಾನಿನ್ನು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಾಯೋಜಕರನ್ನು ನಂಬಿಕೊಂಡು ನಾನು ಸ್ಪರ್ಧೆಗಿಳಿಯಬೇಕಾದ ಚಿಂತೆಯೂ ಇಲ್ಲ' ಎಂದು ರೆನ್ನೀ ಗ್ರೇಸಿ ಹೇಳಿದ್ದಾರೆ.

ಆಸ್ಟ್ರೇಲಿಯಾದ ಮೊದಲ ಸೂಪರ್​ಕಾರ್​ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರೆನ್ನೀ ಗ್ರೇಸಿ, ದಿನಗಳೆದಂತೆ ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. 2012ರಲ್ಲೇ ಪೂರ್ಣಪ್ರಮಾಣದ ಮಹಿಳಾ ಸೂಪರ್​ಕಾರ್​ ರೇಸರ್​ ಆಗಿ ಗುರುತಿಸಿಕೊಂಡಿದ್ದ ಅವರು, 2017ರ ಸಮಯದಲ್ಲಿ ಕೆಲ ಕೆಟ್ಟ ನಿರ್ವಹಣೆಗಳಿಂದಾಗಿ ಪ್ರಾಯೋಜಕರ ಕೊರತೆ ಎದುರಿಸಿದ್ದರು. ಹೀಗಾಗಿ ರೇಸಿಂಗ್​ ತ್ಯಜಿಸಿ, ಪೋರ್ನ್​ ವೆಬ್​ಸೈಟ್​ ಜತೆ ಒಪ್ಪಂದ ಮಾಡಿಕೊಂಡು ನೀಲಿಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ಗ್ರೇಸಿ, ಒಂದು ವಾರಕ್ಕೆ 1.88 ಲಕ್ಷ ರೂಪಾಯಿಯಿಂದ 2.26 ಲಕ್ಷ ರೂಪಾಯಿವರೆಗೆ ಗಳಿಸಲಾರಂಭಿಸಿದ್ದರು. ಇನ್​ಸ್ಟಾಗ್ರಾಂನಲ್ಲೂ ತನ್ನ ಮಾದಕ ಚಿತ್ರಗಳನ್ನು ಹಂಚಿಕೊಳ್ಳುವ ರೆನ್ನೀ ಗ್ರೇಸಿ 7 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ನೀಲಿಚಿತ್ರಗಳ ವೆಬ್​ಸೈಟ್​ ಜತೆಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡ ಮೊದಲ 3 ದಿನಗಳಲ್ಲೇ ತಾನು 41 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದೆ ಎಂದು ಈ ಹಿಂದೆ ತಿಳಿಸಿದ್ದ ಗ್ರೇಸಿ, 'ನಾನು ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಇದು ಎನಿಸುತ್ತದೆ. ನನ್ನ ಜೀವನದಲ್ಲಿ ಹಿಂದೆಂದೂ ಇಷ್ಟೊಂದು ಹಣ ನೋಡಿರಲಿಲ್ಲ. ನನ್ನನ್ನು ಯಾರು, ಏನು ಬೇಕಾದರೂ ಕರೆಯಲಿ. ನಾನು ಈಗ ಚೆನ್ನಾಗಿದ್ದೇನೆ' ಎಂದು ಹೇಳಿಕೊಂಡಿದ್ದರು.

ಮೋಟಾರ್​ಸ್ಪೋರ್ಟ್ಸ್​ಗೆ ಪುನರಾಗಮನ ಕಾಣುತ್ತಿರುವ ನಡುವೆಯೂ ಓನ್ಲಿಫ್ಯಾನ್ಸ್​ ನೀಲಿಚಿತ್ರಗಳ ವೆಬ್​ಸೈಟ್​ ಜತೆಗಿನ ಒಪ್ಪಂದವನ್ನೂ ಮುಂದುವರಿಸಲು ಬಯಸಿರುವ ರೆನ್ನೀ ಗ್ರೇಸಿ, 'ಇಲ್ಲ, ಅದನ್ನು ನಾನು ನಿಲ್ಲಿಸಲಾರೆ. ಅದರಿಂದ ನನಗೆ ಹಣ ಬರುತ್ತಿದೆ. ಅದರಿಂದಲೇ ರೇಸಿಂಗ್​ಗೆ ಮರಳಲು ಸಾಧ್ಯವಾಗುತ್ತಿದೆ' ಎಂದಿದ್ದಾರೆ. ತಮ್ಮದೇ ಸ್ವಂತ ರೇಸಿಂಗ್​ ಟೀಮ್​ ಅನ್ನೂ ಸ್ಥಾಪಿಸುವ ಹಂಬಲವನ್ನು ಅವರು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net