40 ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು, 100 ಕಾಲೇಜುಗಳ ಮೇಲೆ ಕಣ್ಣಿಟ್ಟ ರಾಷ್ಟ್ರೀಯ ವೈದ್ಯಕೀಯ ಆಯೋಗ

medicle
Published on

ದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸದ ಕಾರಣಕ್ಕಾಗಿ ಕಳೆದ ಎರಡು ತಿಂಗಳುಗಳಲ್ಲಿ ದೇಶಾದ್ಯಂತ ಸುಮಾರು 40 ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ.

ಇದಲ್ಲದೆ, ತಮಿಳುನಾಡು, ಗುಜರಾತ್, ಅಸ್ಸಾಂ, ಪಂಜಾಬ್, ಆಂಧ್ರಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದ ಸುಮಾರು 100 ವೈದ್ಯಕೀಯ ಕಾಲೇಜುಗಳು ತಮ್ಮ ಮಾನ್ಯತೆಯನ್ನು ಕಳೆದು ಕೊಳ್ಳುವ ನಿರೀಕ್ಷೆಯಿದೆ.

ಆಯೋಗವು ನಡೆಸಿದ ತಪಾಸಣೆಯಲ್ಲಿ ಕಾಲೇಜುಗಳು ಸಿಸಿಟಿವಿ ಕ್ಯಾಮೆರಾ ಸಂಬಂಧ ಲೋಪಗಳು, ಬಯೋಮೆಟ್ರಿಕ್ ಹಾಜರಾತಿ, ಅಧ್ಯಾಪಕರ ಕಾರ್ಯವಿಧಾನ ಪಟ್ಟಿ ಹೀಗೆ ಎನ್‌ಎಂಸಿಯ ನಿಗದಿತ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಕಂಡು ಬಂದಿದೆ.

2014ರಿಂದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, 2014ರ ಮೊದಲು 387ರಷ್ಟಿದ್ದ ವೈದ್ಯಕೀಯ ಕಾಲೇಜುಗಳು ಈಗ 654ಕ್ಕೆ ತಲುಪಿವೆ. ಇದಲ್ಲದೆ, 51,348ರಷ್ಟಿದ್ದ ಎಂಬಿಬಿಎಸ್ ಸೀಟುಗಳು 99,763ಕ್ಕೆ ಏರಿಕೆಯಾಗಿವೆ. ಆಯೋಗವು ಒಂದು ತಿಂಗಳ ಕಾಲ ಕಾಲೇಜುಗಳಿಗೆ ಭೇಟಿ ನೀಡಿ ನ್ಯೂನತೆಗಳನ್ನು ಗುರುತಿಸಿದ್ದು, ವೈದ್ಯಕೀಯ ಕಾಲೇಜುಗಳು ಆಯೋಗದ ನಿರ್ಧಾರದ ವಿರುದ್ಧ ಪುರಾವೆಗಳೊಂದಿಗೆ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net