

ರಾಮನಗರ: ಬಲೂನ್ ಆಸೆ ಆಯ್ತು, ಅಮ್ಮಾ ನಂಗೆ ಅದು ಬೇಕು ಎನ್ನುವ ಹಠವನ್ನು ಮಾಡಿತು, ಮಗು ಹಠ ಮಾಡುತ್ತಿದೆಯಲ್ಲಾ ಅಂತಾ ಅಮ್ಮ ದುಡ್ಡು ಕೊಟ್ಟೂ ಕಳುಹಿಸಿದ್ರು, ಆದರೆ ಅಂಗಡಿಗೆ ಹೋದ ಮಗು ಮಾತ್ರ ವಾಪಾಸ್ ಬರಲೇ ಇಲ್ಲ. ಹೌದು, ಇಂತಹ ದುಃಖಕರವಾದ ಘಟನೆಯೊಂದು ರಾಮನಗರದಲ್ಲಿ ನಡೆದಿದೆ. ಮನೆಯಿಂದ ಹೊರಗೆ ಹೋದ ಮಗು ಬಾರದೇ ಇರುವುದರಿಂದ ಕಂಗಾಲಾಗಿರುವ ಪಾಲಕರು, ಮಗುವಿಗಾಗಿ ಹುಡುಕಾಟ ನಡೆಸಿ ನೊಂದು ಹೋಗಿದ್ದಾರೆ.
ಏನಿದು ಘಟನೆ: ರಾಮನಗರದ ಮೆಹಬೂಬ್ ನಗರದ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ಅವರ 4 ವರ್ಷದ ಸಾಕು ಮಗ ದಯಾನ್ ಖಾನ್ ಕಾಣೆಯಾದವನು. ಕಳೆದ ಸೋಮವಾರ (ಸೆ.14) ರಾತ್ರಿ 9 ಗಂಟೆ ಸುಮಾರಿಗೆ ಬಾಲಕ ಆಟವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ. ಹೀಗೆ ಮನೆಯಿಂದ ಹೊರ ಬಂದ ಬಾಲಕನಿಗೆ ಮನೆಯ ಮುಂದೆ ಇದ್ದ ಅಂಗಡಯಲ್ಲಿನ ಬಾಲೂನಿನ ಮೇಲೆ ಆಸೆಯಾಗಿದೆ. ಇತ್ತ ಮನೆ ಒಳಗೆ ಹೋಗಿ ಅಮ್ಮನಿಂದ ೫ ರೂ ಪಡೆದು ಅಂಗಡಿಗೆ ಹೋಗಿದ್ದಾನೆ. ಅಂಗಡಿಗೆ ಬಂದ ಬಾಲಕ ಹಣ ಕೊಟ್ಟು ಬಲೂನ್ ಪಡೆದು ಅಂಗಡಿಯಿಂದ ಹಿಂತಿರುಗಿದೆ ಆದ್ರೆ ಆ ಬಾಲಕ ಮನೆ ಸೇರದೆ ಸೋಮವಾರ ರಾತ್ರಿಯಿಂದ ಕಾಣೆಯಾಗಿದೆ. ಈ ಸಂಬಂಧ ಮಗುವಿನ ಪೋಷಕರು ರಾಮನಗರ ಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.
ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ದಂಪತಿಗೆ ಮಕ್ಕಳಾಗಿರಲಿಲ್ಲ ಹಾಗಾಗಿ ಅಲ್ಮಜ್ ಬೇಗಂ ಅವರ ಸಹೋದರ ಸಂಶೀರ್ ಖಾನ್ ಅವರ ಮಗುವನ್ನ ದತ್ತು ಪಡೆದು ಇವರೆ ಲಾಲನೆ ಪಾಲನೆ ಮಾಡುತ್ತಿದ್ರು. ಆದರೆ ಇದೀಗ ಆ ಬಾಲಕ ಕಾಣೆಯಾಗಿದ್ದಾನೆ ಇದು ಪೋಷಕರಿಗೆ ಅತಿ ದುಃಖ ತರಿಸಿದೆ. ತಮ್ಮ ಮಗನನ್ನ ಕಾಣದೆ ತಾಯಿ ಅಲ್ಮಜ್ ಬೇಗಂ ಕುಗ್ಗಿ ಹೋಗಿದ್ದಾರೆ. ತಮ್ಮ ಮಗನ ಸುಳಿವು ಹಾಗೂ ಹುಡುಕಿ ಕೊಟ್ಟವರಿಗೆ 1 ಲಕ್ಷ ನಗದು ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದು ಹೇಳುತ್ತಿದ್ದಾರೆ.
ಬಹಳ ವರ್ಷಗಳಿಂದ ಮಕ್ಕಳಿಲ್ಲದೆ ಕೊರುಗುತ್ತಿದ್ದ ದಂಪತಿಗೆ ಈ ಬಾಲಕ ನಗುವನ್ನು ತಂದು ನೋವು ಮರೆಸಿದ್ದ, ಇದೀಗ ಇದ್ದಕ್ಕಿದ್ದಂತೆ ನಾಪತ್ತೆ ಆಗಿರುವುದು ಪಾಲಕರಲ್ಲಿ ನೋವು ತರಿಸಿದ್ದರೆ, ಹಲವಾರು ಅನುಮಾನಗಳೊಡನೆ ಪೊಲೀಸರು ಮಗುವಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.